ಉದಯವಾಹಿನಿ,ಲಂಡನ್: ಪ್ರಸಕ್ತ ಸಾಲಿನ ಆಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಿಂದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರನ್ನು ಆಸ್ಟ್ರೇಲಿಯಾ ತಂಡದಿಂದ ಕೈಬಿಡಬೇಕು ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲೆಸ್ಪಿ ಆಗ್ರಹಿಸಿದ್ದಾರೆ. ಐದು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಎರಡು ಟೆಸ್ಟ್‌ಗಳನ್ನು ಗೆದ್ದಿರುವ ಆಸ್ಟ್ರೇಲಿಯಾ, ಇದೀಗ ಲೀಡ್ಸ್‌ನ ಹೆಡಿಂಗ್ಲೇಯಲ್ಲಿ ನಡೆಯುತ್ತಿರುವ 3ನೇ ಟೆಸ್ಟ್‌ನಲ್ಲಿ ಸೋಲಿನ ಸುಳಿಯಲ್ಲಿದೆ. ಮೂರನೇ ಟೆಸ್ಟ್ ಪಂದ್ಯದ ಫಲಿತಾಂಶ ಏನೇ ಆಗಿದ್ದರೂ ವಾರ್ನರ್‌ನ ಕೈಬಿಡಬೇಕು ಎಂದು ಗಿಲೆಸ್ಪಿ ಅಭಿಪ್ರಾಯ ಪಟ್ಟಿದ್ದಾರೆ. ಸರಣಿಯಲ್ಲಿ ನಡೆದ ಮೂರು ಟೆಸ್ಟ್‌ಗಳಲ್ಲಿ ವಾರ್ನರ್ ಕೇವಲ ಒಂದು ಅರ್ಧಶತಕ ಮಾತ್ರ ಬಾರಿಸಿದ್ದಾರೆ. ಅಸ್ಥಿರ ಪ್ರದರ್ಶನ ನೀಡಿರುವ ವಾರ್ನರ್ ಅವರನ್ನು ಕೈಬಿಟ್ಟು ಯುವ ಬ್ಯಾಟರ್ ಮ್ಯಾಟ್ ರೆನ್ಶಾ ಅವರನ್ನು ಆಡಿಸುವಂತೆ ಮಾಜಿ ವೇಗಿ ಸಲಹೆ ನೀಡಿದ್ದಾರೆ.
“ಆಸ್ಟ್ರೇಲಿಯಾ ತಂಡ ಒಂದೆರಡು ಅಂಶಗಳಲ್ಲಿ ಹಿಂದೆ ಬೀಳುತ್ತಿದೆ ಎಂಬುದು ನನ್ನ ಅಭಿಪ್ರಾಯ. ಮೂರನೇ ಟೆಸ್ಟ್ ಗೆದ್ದು ಸರಣಿ ಜಯ ದಾಖಲಿಸಿದರೂ ಸರಿ ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಕೆಲ ಅಗತ್ಯದ ಬದಲಾವಣೆಗಳನ್ನು ತಂದುಕೊಳ್ಳಬೇಕಿದೆ. ಡೇವಿಡ್ ವಾರ್ನರ್ ಅವರನ್ನು ಕೈಬಿಟ್ಟು ಮ್ಯಾಟ್ ರೆನ್ಶಾ ಅವರನ್ನು ಆಡಿಸಬೇಕು,” ಎಂದು ಗಿಲೆಸ್ಪಿ ಹೇಳಿದ್ದಾರೆ. “ಮುಂದಿನ ವರ್ಷ ಜನವರಿಯಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿನ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ತಮ್ಮ ಟೆಸ್ಟ್ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಲು ವಾರ್ನರ್ ಯೋಜನೆ ಹಾಕಿಕೊಂಡಿದ್ದಾರೆ. ಆದರೆ, ಅಲ್ಲಿಯವರೆಗೆ ಅವರು ಆಸ್ಟ್ರೇಲಿಯಾ ತಂಡದಲ್ಲಿ ಮುಂದುವರಿದರೆ ಅಚ್ಚರಿ ಆಗಲಿದೆ. ತಂಡದಲ್ಲಿ ಉಳಿಯಲು ರನ್ ಗಳಿಸಬೇಕು. ಆಸೀಸ್ ಪರ ವಾರ್ನರ್ ಹೇರಳ ರನ್ ಗಳಿಸಿದ್ದಾರೆ. ಆದರೆ, ಇತ್ತೀಚೆಗೆ ಅವರ ಬ್ಯಾಟ್‌ನಿಂದ ರನ್ ಬಂದಿಲ್ಲ. ಅವರ ಮೇಲಿನ ಹೆಗ್ಗಳಿಕೆ ನಿಧಾನವಾಗಿ ಕರಗುತ್ತಿದೆ,” ಎಂದಿದ್ದಾರೆ.
