ಉದಯವಾಹಿನಿ, ಪುದುಚೇರಿ: ಸುಸ್ಥಿರ ಇಂಗಾಲ ನಿಯಂತ್ರಿತ ನಗರವಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಪುದುಚೇರಿ ರಸ್ತೆ ಸಾರಿಗೆ ನಿಗಮ (ಪಿಆರ್‌ಟಿಸಿ) ಒಲೆಕ್ಟ್ರಾ ತಯಾರಿಸಿದ 25 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಸಾರ್ವಜನಿಕ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದೆ. ಇಲ್ಲಿನ ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಶನಾಥನ್, ಮುಖ್ಯಮಂತ್ರಿ ಎನ್. ರಂಗಸಾಮಿ ಮತ್ತು ಸ್ಪೀಕರ್ ಆರ್. ಸೆಲ್ವಂ ಅವರು ಹಿರಿಯ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಈ ನೂತನ ಪರಿಸರ ಸ್ನೇಹಿ ಬಸ್‌ಗಳಿಗೆ ಔಪಚಾರಿಕವಾಗಿ ಹಸಿರು ನಿಶಾನೆ ತೋರಿದರು.
ಈ ಸೇವೆಗಳು ಪುದುಚೇರಿ ಸರ್ಕಾರದ ಸ್ಮಾರ್ಟ್ ಸಿಟಿ ಉಪಕ್ರಮದ ಅಡಿಯಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಇದು ಸ್ವಚ್ಛ, ದಕ್ಷ ಮತ್ತು ಆಧುನಿಕ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವತ್ತ ಮಹತ್ವದ ಹೆಜ್ಜೆ ಆಗಿದೆ. ಇವಿ ಬಸ್‌ಗಳ ಉತ್ಪಾದನೆಯ ದೇಶೀಯ ಸಂಸ್ಥೆಯಾಗಿರುವ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟ ಈ 15 ಮತ್ತು 10 ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಒಳಗೊಂಡಿದೆ, ಪ್ರತಿಯೊಂದೂ 9 ಮೀಟರ್ ಉದ್ದವಿದ್ದು, ಪ್ರಯಾಣಿಕರಿಗೆ ಆರಾಮದಾಯಕ, ಶಬ್ದ-ಮುಕ್ತ ಮತ್ತು ಶೂನ್ಯ-ಹೊರಸೂಸುವಿಕೆ ಪ್ರಯಾಣವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಪ್ರತಿ ಬಸ್ ಒಂದೇ ಚಾರ್ಜ್‌ನಲ್ಲಿ 200 ಕಿಲೋ ಮೀಟರ್‌ಗಳವರೆಗೆ ಪ್ರಯಾಣಿಸುವ ಸಾಮರ್ಥ್ಯಹೊಂದಿದ್ದು, ಈ ಬಸ್‌ಗಳನ್ನು 12 ವರ್ಷಗಳ ಅವಧಿಗೆ ಎಂ.ಇ.ಐ.ಎಲ್ ಗ್ರೂಪ್ ಕಂಪನಿಯಾದ ಈವೇ ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್, ಒಟ್ಟು ವೆಚ್ಚದ ಒಪ್ಪಂದ ಅಂದರೆ ಜಿಸಿಸಿ ಮಾದರಿಯಡಿಯಲ್ಲಿ ನಿರ್ವಹಿಸುವ ಹೊಣೆಗಾರಿಕೆ ಹೊಂದಿದೆ. ಈ ಕುರಿತು ಮಾತನಾಡಿದ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಾಬು, ʼಸುಸ್ಥಿರ ಚಲನಶೀಲತೆಯ ಮೂಲಕ ಸ್ಮಾರ್ಟ್ ಸಿಟಿ ಮಿಷನ್ ಅನ್ನು ಮುನ್ನಡೆಸುವಲ್ಲಿ ಪುದುಚೇರಿ ಸರ್ಕಾರ ಮತ್ತು ಪಿಆರ್‌ಟಿಎಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ನಾವು ಸಂತೋಷಪಡುತ್ತೇವೆ. ಈ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆಯು ಭಾರತಕ್ಕೆ ಸ್ವಚ್ಛ ಮತ್ತು ಹಸಿರು ಸಾರಿಗೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಒಲೆಕ್ಟ್ರಾದ ಬದ್ಧತೆಗೆ ಸಾಕ್ಷಿಯಾಗಿದೆ. ಈ ಉಪಕ್ರಮವನ್ನು ನಿಜವಾಗಿಸುವಲ್ಲಿ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಪುದುಚೇರಿಯ ಆಡಳಿತಕ್ಕೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆʼ ಎಂದರು.
