ಉದಯವಾಹಿನಿ, ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 49% ವಿದೇಶಿ ನೇರ ಹೂಡಿಕೆಗೆ ಭಾರತ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆ ಇದೆ.ಕಳೆದ ಎರಡು ತಿಂಗಳಿಂದ ಹಣಕಾಸು ಸಚಿವಾಲಯವು ದೇಶದ ಬ್ಯಾಂಕಿಂಗ್ ವಲಯದ ನಿಯಂತ್ರಕ ಸಂಸ್ಥೆಯಾದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜೊತೆ ಈ ವಿಷಯದ ಬಗ್ಗೆ ಚರ್ಚಿಸುತ್ತಿದೆ. ಈ ಪ್ರಸ್ತಾವನೆಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.
ಪ್ರಸ್ತುತ ಶೇ.20 ಎಫ್‌ಡಿಐ ಮಿತಿ ಹೇರಿದೆ. ಹೊಸ ಕ್ರಮವು ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳ ನಿಯಮಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿದೆ. ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಪ್ರಸ್ತುತ ಎಫ್‌ಡಿಐ ಮಿತಿ ಶೇ.74 ರಷ್ಟಿದೆ. ಈ ಬಗ್ಗೆ ಆರ್‌ಬಿಐ ಜೊತೆಗೆ ಹಣಕಾಸು ಸಚಿವಾಲಯ ಚರ್ಚಿಸುತ್ತಿದೆ.
ಭಾರತದ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲು ವಿದೇಶಿ ಕಂಪನಿಗಳು ಆಸಕ್ತಿ ತೋರಿಸುತ್ತಿವೆ. ಶೀಘ್ರದಲ್ಲೇ ಹೂಡಿಕೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ.
ದುಬೈ ಮೂಲದ ಎಮಿರೇಟ್ಸ್ ಎನ್‌ಬಿಡಿ ಇತ್ತೀಚೆಗೆ ಆರ್‌ಬಿಎಲ್ ಬ್ಯಾಂಕಿನಲ್ಲಿ 60% ಪಾಲನ್ನು 3 ಬಿಲಿಯನ್‌ ಡಾಲರ್‌ಗೆ ಖರೀದಿಸಿದೆ. ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್ ಕಾರ್ಪ್ ಯೆಸ್ ಬ್ಯಾಂಕಿನಲ್ಲಿ 20% ಪಾಲನ್ನು 1.6 ಬಿಲಿಯನ್‌ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿದ್ದು, ಜಪಾನಿನ ಸಾಲದಾತ ನಂತರ ಇದನ್ನು ಮತ್ತೊಂದು 4.99% ಹೆಚ್ಚಿಸಿದ್ದರಿಂದ ಭಾರತದ ಬ್ಯಾಂಕಿಂಗ್ ಉದ್ಯಮದಲ್ಲಿ ವಿದೇಶಿ ಆಸಕ್ತಿ ಹೆಚ್ಚುತ್ತಿದೆ.

 

Leave a Reply

Your email address will not be published. Required fields are marked *

error: Content is protected !!