ಉದಯವಾಹಿನಿ, ಬಹುಭಾಷಾ ನಟಿ ಸಮಂತಾ ರುತ್ ಪ್ರಭು ತೆಲುಗು ಚಿತ್ರವೊಂದನ್ನು ಒಪ್ಪಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ. 2023ರಲ್ಲಿ ರಿಲೀಸ್‌ ಆದ ನಟ ವಿಜಯ್ ದೇವರಕೊಂಡ ಜತೆಗಿನ ‘ಖುಷಿ’ ಚಿತ್ರವೇ ಕೊನೆ. ಬಳಿಕ ಸಮಂತಾ ಅಭಿನಯದ ಯಾವ ಚಿತ್ರವೂ ತೆರೆಕಂಡಿಲ್ಲ. ಇದೀಗ ಅವರು ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ನಂದಿನಿ ರೆಡ್ಡಿ ನಿರ್ದೇಶನದ ʼಮಾ ಇಂಟಿ ಬಂಗಾರಂʼ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಹೈದರಾಬಾದ್‌ನಲ್ಲಿ ‘ಮಾ ಇಂಟಿ ಬಂಗಾರಂʼ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಈ ಹಿಂದೆ ಸಮಂತಾ ನಟನೆಯ ʼಓಹ್ ಬೇಬಿʼ ಮತ್ತು ʼಜಬರ್ದಸ್ತ್ʼ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ನಂದಿನಿ ರೆಡ್ಡಿ ಅವರೇ ಈ ಸಿನಿಮಾವನ್ನೂ ನಿರ್ದೇಸಿಸುತ್ತಿರುವುದು ವಿಶೇಷ. ಈಗಾಗಲೇ ಅನೇಕ ಕಡೆ ಶೂಟಿಂಗ್‌ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಬಗ್ಗೆ ಸ್ವತಃ ನಿರ್ದೇಶಕಿ ನಂದಿನಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಮಂತಾ ಈ ಸಿನಿಮಾದ ಮುಹೂರ್ತದ ವಿಡಿಯೊವನ್ನು ಕೆಲವು ದಿನಗಳ ಹಿಂದೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ʼʼನಿಮ್ಮೆಲ್ಲರ ಪ್ರೀತಿ, ಆಶೀರ್ವಾದಗಳಿಂದ ‘ಮಾ ಇಂಟಿ ಬಂಗಾರಂ’ ಚಿತ್ರದ ಮುಹೂರ್ತದೊಂದಿಗೆ ನಮ್ಮ ಪ್ರಯಾಣವನ್ನು ಮತ್ತೆ ಪ್ರಾರಂಭಿಸಿದ್ದೇವೆ. ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ನಮಗೆ ಬೇಕು’ʼ ಎಂದು ಬರೆದಿದ್ದರು. ಸಮಂತಾ ಅವರ ಮುಂದಿನ ಸಿನಿಮಾ ಶೂಟಿಂಗ್ ಹಂತದಲ್ಲೇ ಸಂಚಲನ ಉಂಟು ಮಾಡುತ್ತಿದೆ.
ಈ ಬಗ್ಗೆ ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ನಿರ್ದೇಶಕಿ ನಂದಿನಿ, ʼʼಸಮಂತಾ ಅವರೊಂದಿಗೆ 3ನೇ ಬಾರಿಗೆ ಸಿನಿಮಾ ಮಾಡುವ ಬಗ್ಗೆ ನಾನು ಉತ್ಸುಕಳಾಗಿದ್ದೇನೆ. ಈ ಕಥೆ, ಅವರ ಸ್ಟಾರ್ ಪವರ್‌ಗೆ ಸಂಪೂರ್ಣ ನ್ಯಾಯ ಒದಗಿಸುತ್ತದೆ ಎಂದು ನನಗೆ ನಂಬಿಕೆ ಇದೆ. ಸ್ಯಾಮ್ ಅವರೊಂದಿಗೆ ಈ ಹೊಸ ಸಿನಿಮಾ ನಿಮ್ಮೆಲ್ಲರ ಸಹಕಾರದಿಂದ ಚೆನ್ನಾಗಿ ಬರಲಿ” ಎಂದು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!