ಉದಯವಾಹಿನಿ, ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 4ನೇ ಪುಣ್ಯಸ್ಮರಣೆ ಹಿನ್ನೆಲೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ದೊಡ್ಮನೆ ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.ಕಂಠೀರವ ಸ್ಟುಡಿಯೋಕ್ಕೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಶಿವರಾಜಕುಮಾರ್‌ ರಾಘಣ್ಣ ದಂಪತಿ, ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಸೇರಿದಂತೆ ಕುಟುಂಬಸ್ಥರು ಆಗಮಿಸಿ, ಪೂಜೆಗೆ ಸಿದ್ಧತೆ ಮಾಡಿಕೊಂಡು ಬಳಿಕ ಅಪ್ಪುಗೆ ಇಷ್ಟವಾದ ತಿನಿಸುಗಳನ್ನಿಟ್ಟು ಪೂಜೆ ನೆರವೇರಿಸಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿದ್ದು, ಅಪ್ಪು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಪೂಜೆ ವೇಳೆ ಅಭಿಮಾನಿಗಳು ಅಪ್ಪು ಅಪ್ಪು ಅಂತಾ ಜೈಕಾರ ಹಾಕುತ್ತಿದ್ದು, ಕೈಯಲ್ಲಿ ರೋಸ್ ಹಿಡಿದು ಆಗಮಿಸುತ್ತಿದ್ದಾರೆ. ಇನ್ನೂ ಯುವ ರಾಜ್‌ಕುಮಾರ್‌ನ್ನು ನೋಡಿ ಜೂ.ಪವರ್ ಸ್ಟಾರ್‌ಗೆ ಎಂದು ಜೈ ಎಂದು ಜೈಕಾರ ಹಾಕುತ್ತಿದ್ದಾರೆ. ಈ ವರ್ಷ ವಿಶೇಷ ಅಂದ್ರೆ ಅಪ್ಪು ಅವರ ಫ್ಯಾನ್ ಡಮ್ ಆ್ಯಪ್ ಲಾಂಚ್ ಆಗಿದೆ.ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಕುಟುಂಬಸ್ಥರು ಪಾರ್ವತಮ್ಮ ಹಾಗೂ ಡಾ. ರಾಜ್‌ಕುಮಾರ್ ಸಮಾಧಿಗೆ ಪೂಜೆ ಮಾಡಿದ್ದಾರೆ.
ಪುನೀತ್ ಸಮಾಧಿಗೆ ಬಿಳಿ ಗುಲಾಬಿ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಇಂದು ಇಡೀ ದಿನ ಕಂಠೀರವ ಸ್ಟುಡಿಯೋದಲ್ಲಿ ಅನ್ನಸಂತರ್ಪಣೆ ಹಾಗೂ ರಕ್ತದಾನ, ನೇತ್ರದಾನ ಶಿಬಿರವನ್ನು ಅಭಿಮಾನಿಗಳು ಅಯೋಜಿಸಿದ್ದಾರೆ. ಬೆಟ್ಟದ ಹೂವು ಅಪ್ಪು ಎಂದಿಗೂ ಬಾಡದ ಹೂವಾಗಿ ಅಭಿಮಾನಿಗಳ ಹೃದಯಮಂದಿರದಲ್ಲಿ ನೆಲೆಸಿದ್ದಾರೆ. ದೈಹಿಕವಾಗಿ ನಮ್ಮ ಜೊತೆಗೆ ಅಪ್ಪು ಇಲ್ಲದಿದ್ದರೂ, ತಾವು ಮಾಡಿದ ಸಮಾಜಮುಖಿ ಕಾರ್ಯಗಳು, ಸಿನಿಮಾಗಳ ಮೂಲಕ ನಮ್ಮೊಂದಿಗೆ ಅಜರಾಮರವಾಗಿ ಉಳಿದಿದ್ದಾರೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವುದನ್ನ ಮತ್ತೆ ಪ್ರೂವ್ ಮಾಡಿದ್ದಾರೆ ಫ್ಯಾನ್ಸ್. ಅವರ ಈ ಪುಣ್ಯಸ್ಮರಣೆಯ ದಿನವನ್ನ ಅವರ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!