ಉದಯವಾಹಿನಿ, ಕ್ಯಾನ್‌ಬೆರಾ: ಭಾರತ ತಂಡದ ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ಅವರು ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯ ಆರಂಭಿಕ ಮೂರು ಪಂದ್ಯಗಳಿಂದ ಹೊರ ನಡೆದಿದ್ದಾರೆ. ಆ ಮೂಲಕ ಟಿ20ಐ ಸರಣಿಯ ಆರಂಭಕ್ಕೂ ಮುನ್ನ ಟೀಮ್‌ ಇಂಡಿಯಾಗೆ ಆರಂಭಿಕ ಆಘಾತ ಅನುಭವಿಸಿದೆ. ಇದೀಗ ಕ್ಯಾನ್‌ಬೆರಾದ ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಮೊದಲನೇ ಟಿ20ಐ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್‌ ಮಾರ್ಷ್‌ ಬೌಲಿಂಗ್‌ ಆಯ್ದುಕೊಂಡಿದ್ದಾರೆ ಹಾಗೂ ಎದುರಾಳಿ ಭಾರತಕ್ಕೆ ಮೊದಲ ಬ್ಯಾಟಿಂಗ್‌ಗೆ ಆಹ್ವಾನ ನೀಡಿದ್ದಾರೆ.
“ಟಿ20ಐ ಸರಣಿಯ ಆರಂಭಿಕ ಮೂರು ಪಂದ್ಯಗಳಿಂದ ನಿತೀಶ್‌ಕುಮಾರ್‌ ರೆಡ್ಡಿ ಹೊರ ನಡೆದಿದ್ದಾರೆ. ಅಡಿಲೇಡ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದ ವೇಳೆ ಎಡ ಕ್ವಾಡ್ರೈಸ್ಪ್ಸ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಆಲ್‌ರೌಂಡರ್, ಕುತ್ತಿಗೆ ಸೆಳೆತದ ಬಗ್ಗೆ ದೂರು ನೀಡಿದ್ದು, ಇದು ಅವರ ಚೇತರಿಕೆ ಮತ್ತು ಚಲನಶೀಲತೆಯ ಮೇಲೆ ಪರಿಣಾಮ ಬೀರಿದೆ. ತಂಡದ ವೈದ್ಯಕೀಯ ಸಿಬ್ಬಂದಿ ನಿತೀಶ್‌ ರೆಡ್ಡಿ ಅವರನ್ನು ನಿರ್ವಹಿಸುತ್ತಿದೆ,” ಎಂದು ಪಂದ್ಯದ ಟಾಸ್‌ ವೇಳೆ ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ವೇಳೆ ನಿತೀಶ್‌ಕುಮಾರ್‌ ರೆಡ್ಡಿ ಅಂತಾರಾಷ್ಟ್ರೀಯ ಒಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಹಾರ್ದಿಕ್‌ ಪಾಂಡ್ಯ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ನಿತೀಶ್‌ ರೆಡ್ಡಿಗೆ ಅವಕಾಶ ಸಿಕ್ಕಿತ್ತು. ಆದರೆ, ಅಡಿಲೇಡ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದ ವೇಳೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆಲ್‌ರೌಂಡರ್‌ ಗಾಯಕ್ಕೆ ತುತ್ತಾಗಿದ್ದರು. ನಿತೀಶ್‌ ರೆಡ್ಡಿ ಯಾವಾಗ ಸಂಪೂರ್ಣವಾಗಿ ಫಿಟ್‌ ಆಗಲಿದ್ದಾರೆಂದು ಇನ್ನೂ ಖಚಿತವಿಲ್ಲ. ಹಾಗಾಗಿ ಕೊನೆಯ ಎರಡು ಪಂದ್ಯಗಳಿಗೆ ಅವರು ಲಭ್ಯವಾಗುವುದೂ ಕೂಡ ಖಚಿತವಿಲ್ಲ. ಆದರೆ, ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಸರಣಿಯ ಹೊತ್ತಿಗೆ ಬಹುಶಃ ಅವರು ಸಂಪೂರ್ಣ ಫಿಟ್‌ ಆಗಬಹುದು.
ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಇಬ್ಬರು ಫಾಸ್ಟ್‌ ಬೌಲರ್‌ಗಳು ಹಾಗೂ ಮೂವರು ಸ್ಪಿನ್ನರ್‌ಗಳನ್ನು ಆರಿಸಲಾಗಿದೆ. ಇದರ ಜೊತೆಗೆ ಸೀಮ್ ಬೌಲಿಂಗ್‌ ಆಲ್‌ರೌಂಡರ್‌ ಶಿವಂ ದುಬೆಗೆ ಅವಕಾಶವನ್ನು ನೀಡಲಾಗಿದೆ. ಟಿ20ಐ ಕ್ರಿಕೆಟ್‌ನಲ್ಲಿ 100ಕ್ಕೂ ಅಧಿಕ ವಿಕೆಟ್‌ ಕಿತ್ತಿರುವ ಅರ್ಷದೀಪ್‌ ಸಿಂಗ್‌ಗೆ ಮತ್ತೊಂದು ಬೆಂಚ್‌ ಕಾಯಿಸಲಾಗಿದೆ. ಪೂರ್ಣ ಪ್ರಮಾಣದ ವೇಗದ ಬೌಲರ್‌ಗಳಾಗಿ ಜಸ್‌ಪ್ರೀತ್‌ ಬುಮ್ರಾ ಹಾಗೂ ಹರ್ಷಿತ್‌ ರಾಣಾ ಆಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!