ಉದಯವಾಹಿನಿ, ಬೆಂಗಳೂರು: ಕಷ್ಟಪಟ್ಟು ಜೀವನವೆಲ್ಲಾ ದುಡಿದು ಕೂಡಿಟ್ಟ ಹಣ ಬ್ಯಾಂಕ್ ಗಳಲ್ಲಿ ಸೇಫಾ ಅನ್ನೊ ಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ. 300 ಖಾತೆದಾರರ 70 ಕೋಟಿ ಹಣವನ್ನ ಕೊ-ಆಪರೇಟೀವ್ ಬ್ಯಾಂಕ್ ಸಿಬ್ಬಂದಿಗಳೇ ನುಂಗಿ ನೀರು ಕುಡಿದಿದ್ದಾರೆ.
ಇಪಿಎಫ್‌ಒ ಸಿಬ್ಬಂದಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಡೆದ 70 ಕೋಟಿ ರೂ. ವಂಚನೆ ಪ್ರಕರಣ (Fraud case) ಸಂಬಂಧ ಸಿಇಒ ಸೇರಿ ಇಬ್ಬರು ಪ್ರಮುಖ ಆರೋಪಿಗಳನ್ನ ಕಬ್ಬನ್ ಪಾರ್ಕ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೊಸೈಟಿಯ ಸಿಇಒ ಗೋಪಿನಾಥ್ ಹಾಗೂ ಸಿಬ್ಬಂದಿ ಲಕ್ಷ್ಮಿ ಜಗದೀಶ್ ಅರೆಸ್ಟ್ ಆಗಿದ್ದಾರೆ. ಇಪಿಎಫ್‌ಒ ಸಿಬ್ಬಂದಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಕಳೆದ 61 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದು ಇಪಿಎಫ್‌ಒ ಸಿಬ್ಬಂದಿ ಪರಸ್ಪರ ನೆರವಿಗಾಗಿ ಸ್ಥಾಪಿಸಿಕೊಂಡಿರುವ ಸಂಸ್ಥೆಯಾಗಿದೆ.
ಪ್ರಸ್ತುತ ಮತ್ತು ನಿವೃತ್ತ ಇಪಿಎಫ್‌ಒ ಸಿಬ್ಬಂದಿ ತಮ್ಮ ಉಳಿತಾಯವನ್ನ ಈ ಸೊಸೈಟಿಯಲ್ಲಿ ಎಫ್‌ಡಿ ಮಾಡಿದ್ದರು. ಈ ಠೇವಣಿಗಳಿಗೆ ಪ್ರತಿ ತಿಂಗಳು ಬಡ್ಡಿ ಹಣ ನೀಡಲಾಗುತ್ತಿತ್ತು. ಕಳೆದ ಮೂರು ತಿಂಗಳಿಂದ ಹೂಡಿಕೆದಾರರಿಗೆ ಬಡ್ಡಿ ಹಣ ಜಮೆಯಾಗದ ಕಾರಣ ಅನುಮಾನಗೊಂಡು, ಹೂಡಿಕೆದಾರರು ಸ್ವತಃ ಪರಿಶೀಲಿಸಿದಾಗ, ಸೊಸೈಟಿಯಲ್ಲಿ ಇರಿಸಿದ್ದ ಫಿಕ್ಸೆಡ್ ಡೆಪಾಸಿಟ್ ಹಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕೇವಲ ಮೂರು ಕೋಟಿ ರೂಪಾಯಿಗಳನ್ನ ಮಾತ್ರ ಸಾಲವಾಗಿ ನೀಡಲಾಗಿದ್ದು, ಉಳಿದ 70 ಕೋಟಿ ರೂ. ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಲಾಗಿದೆ. ಸುಮಾರು 300ಕ್ಕೂ ಹೆಚ್ಚು ಠೇವಣಿದಾರರು ಈ ವಂಚನೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
