ಉದಯವಾಹಿನಿ, ಬೀಜಿಂಗ್ : ಚೀನಾದ ಕಂಪನಿಯೊಂದು ಸಾರಿಗೆ ಜಗತ್ತಿನಲ್ಲಿ ಕ್ರಾಂತಿಕಾರಿ ಆವಿಷ್ಕಾರಕ್ಕೆ ಮುಂದಾಗಿದೆ. ಮುಂದಿನ ಪೀಳಿಗೆಯ ಕಾರು ಎಂದು ಹೇಳಲಾದ ಹಾರುವ ಕಾರುಗಳ ಪ್ರಾಯೋಗಿಕ ಉತ್ಪಾದನೆಯನ್ನು ಪ್ರಾರಂಭಿಸಿದೆ. ಅಮೆರಿಕದ ಟೆಸ್ಲಾ ಕಂಪನಿ ಮತ್ತು ಇತರರು ಶೀಘ್ರದಲ್ಲೇ ಅದೇ ರೀತಿ ಪ್ರಾರಂಭಿಸಲು ಈಗಾಗಲೇ ಯೋಜಿಸಿದ್ದಾರೆ. ಈ ಬಗೆಗಿನ ಸಂಶೋಧನೆಗಳು ಸದ್ದಿಲ್ಲದೇ ಕಾರ್ಯರೂಪಕ್ಕೆ ಬರುತ್ತಿವೆ.
ಆದರೆ, ಚೀನಾದ ಈ ಕಂಪನಿ ಅಮೆರಿಕ ಹಾಗೂ ಇತರ ಐರೋಪ್ಯ ಸಂಸ್ಥೆಗಳಿಗೆ ಸಡ್ಡು ಹೊಡೆಯುವಂತೆ ಈಗಾಗಲೇ ಸದ್ದಿಲ್ಲದೇ ಹಾರುವ ಕಾರುಗಳ ಪ್ರಾಯೋಗಿಕ ಉತ್ಪಾದನೆಯನ್ನೇ ಆರಂಭಿಸುವ ಮೂಲಕ ಮಾರ್ಕೆಟ್​ ಲೀಡರ್​​ ಟೆಸ್ಲಾಗೆ ಟಕ್ಕರ್​ ಕೊಟ್ಟಿದೆ.
ಚೀನಾದ ಎಲೆಕ್ಟ್ರಿಕ್ ವಾಹನ ತಯಾರಕ ಎಕ್ಸ್​​​​​ಪೆಂಗ್​ ಹಾರುವ ಕಾರು ಅಂಗಸಂಸ್ಥೆಯಾದ ಎಕ್ಸ್​​​​​ಪೆಂಗ್ ಏರೋಹ್ಟ್ ಸೋಮವಾರ ಬೃಹತ್ ಪ್ರಮಾಣದಲ್ಲಿ ಹಾರುವ ಕಾರುಗಳ ಉತ್ಪಾದನೆಗೆ ಮುನ್ನುಡಿ ಬರೆದಿದೆ. ತನ್ನ ಕಾರ್ಖಾನೆಯಲ್ಲಿ ವಿಶ್ವದ ಮೊದಲ ಪ್ರಾಯೋಗಿಕ ಉತ್ಪಾದನೆಯನ್ನು ಪ್ರಾರಂಭಿಸಿದೆ. ಮುಂದಿನ ಪೀಳಿಗೆಯ ಸಾರಿಗೆ ಎಂದು ಪ್ರಸಿದ್ಧಿ ಪಡೆದಿರುವ ಹಾರುವ ಕಾರುಗಳ ವಾಣಿಜ್ಯೀಕರಣದಲ್ಲಿ ಒಂದು ಮೈಲಿಗಲ್ಲನ್ನು ಬರೆಯಲು ಮುಂದಾಗಿದೆ.
ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ರಾಜಧಾನಿ ಗುವಾಂಗ್‌ಝೌದ ಹುವಾಂಗ್‌ಪು ಜಿಲ್ಲೆಯಲ್ಲಿ ನೆಲೆಗೊಂಡಿರುವ 120,000 ಚದರ ಮೀಟರ್ ಸ್ಥಾವರದಲ್ಲಿ ತನ್ನ ಮಾಡ್ಯುಲರ್ ಹಾರುವ ಕಾರಿನ ಮೊದಲ ಡಿಟ್ಯಾಚೇಬಲ್ ಎಲೆಕ್ಟ್ರಿಕ್ ವಿಮಾನವಾದ ಲ್ಯಾಂಡ್ ಏರ್‌ಕ್ರಾಫ್ಟ್ ಕ್ಯಾರಿಯರ್ ಅನ್ನು ಈಗಾಗಲೇ ಹೊರತಂದಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.ಈ ಸೌಲಭ್ಯವು ವಾರ್ಷಿಕ 10,000 ಡಿಟ್ಯಾಚೇಬಲ್ ವಿಮಾನ ಮಾಡ್ಯೂಲ್‌ಗಳ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಆರಂಭಿಕ ಸಾಮರ್ಥ್ಯ 5,000 ಯೂನಿಟ್​ ಗಳಾಗಿವೆ. ಇದು ಅತಿದೊಡ್ಡ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಕಾರ್ಖಾನೆಯಾಗಿದ್ದು, ಈ ರೀತಿಯ ಅತಿದೊಡ್ಡ ಉತ್ಪಾದನೆ ಮಾಡುವ ವಿಶ್ವದ ಮೊದಲ ಕಾರ್ಖಾನೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಷ್ಟೇ ಅಲ್ಲ ಹಾರುವ ಕಾರುಗಳನ್ನು ಉತ್ಪಾದನೆ ಮಾಡುವ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದ ಮೊದಲ ಕಾರ್ಖಾನೆ ಅಥವಾ ಕಂಪನಿ ಎಂಬ ಗರಿಮೆಗೂ ಪಾತ್ರವಾಗಿದೆ. ಈ ಕಾರ್ಖಾನೆ ಪ್ರತಿ 30 ನಿಮಿಷಗಳಿಗೊಮ್ಮೆ ಒಂದು ವಿಮಾನವನ್ನು ಜೋಡಿಸುವ ಸಾಮರ್ಥ್ಯ ಹೊಂದಿದೆ ಎಂದು ಅದು ಹೇಳಿಕೊಂಡಿದೆ.

 

Leave a Reply

Your email address will not be published. Required fields are marked *

error: Content is protected !!