ಉದಯವಾಹಿನಿ, ನವದೆಹಲಿ: ಏಷ್ಯಾದಲ್ಲೇ ಅತೀ ಹೆಚ್ಚು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಭಾರತವು ಎರಡು ವರ್ಷಗಳ ಬಳಿಕ ವಿಶ್ವವಿದ್ಯಾಲಯಗಳ 2026ರ ಶ್ರೇಯಾಂಕದಲ್ಲಿ ತನ್ನ ಮೊದಲ ಸ್ಥಾನವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ. ಭಾರತದ ಹತ್ತು ಉನ್ನತ ಶ್ರೇಯಾಂಕಿತ ಶಿಕ್ಷಣ ಸಂಸ್ಥೆಗಳ ಪೈಕಿ ಒಂಬತ್ತು ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಕಳೆದ ವರ್ಷಕ್ಕಿಂತ ಕುಸಿದಿರುವುದರಿಂದ ಈ ಬಾರಿ ಭಾರತ ಏಷ್ಯಾದಲ್ಲೇ ಎರಡನೇ ಸ್ಥಾನವನ್ನು ಪಡೆದಿದೆ. ಶ್ರೇಯಾಂಕದಲ್ಲಿ ಭಾರತ ಎರಡನೇ ಸ್ಥಾನಕ್ಕೆ ಕುಸಿದರೂ ಕೂಡ ಅದು ಸಂಶೋಧನಾ ಉತ್ಪಾದಕತೆ ಮತ್ತು ಅಧ್ಯಾಪಕರ ಬಲದಲ್ಲಿ ತನ್ನ ಉನ್ನತ ಸ್ಥಾನವನ್ನು ಕಾಯ್ದುಕೊಂಡಿದೆ.

ಭಾರತದ ಟಾಪ್ 10 ಸಂಸ್ಥೆಗಳಲ್ಲಿ ಏಳು ಐಐಟಿಗಳು ಸೇರಿವೆ. ಅವುಗಳೆಂದರೆ ದೆಹಲಿ, ಮದ್ರಾಸ್, ಬಾಂಬೆ, ಕಾನ್ಪುರ, ಖರಗ್ಪುರ, ರೂರ್ಕಿ ಮತ್ತು ಗುವಾಹಟಿ. ಇವುಗಳೊಂದಿಗೆ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು, ದೆಹಲಿ ವಿಶ್ವವಿದ್ಯಾಲಯ ಮತ್ತು ಚಂಡೀಗಢ ವಿಶ್ವವಿದ್ಯಾಲಯವು ಸೇರಿವೆ.
ಈ ವರ್ಷದ ಶ್ರೇಯಾಂಕದಲ್ಲಿ ಈ ಬಾರಿ 137 ಭಾರತೀಯ ವಿಶ್ವವಿದ್ಯಾಲಯಗಳು ಪಟ್ಟಿಗೆ ಸೇರಿದೆ. ಈ ಮೂಲಕ ದೇಶದ ಒಟ್ಟು ವಿಶ್ವವಿದ್ಯಾಲಯಗಳ ಸಂಖ್ಯೆ 294ಕ್ಕೆ ತಲುಪಿದೆ. ಚೀನಾದ 261 ಸಂಸ್ಥೆಗಳು ಈ ಬಾರಿ ಸೇರ್ಪಡೆಗೊಂಡಿದ್ದು, ಈ ಮೂಲಕ ವಿಶ್ವವಿದ್ಯಾನಿಲಯ ಒಟ್ಟು ಸಂಖ್ಯೆ 395 ಸಂಸ್ಥೆಗಳನ್ನು ತಲುಪಿದೆ. ಈ ವರ್ಷದ ಶ್ರೇಯಾಂಕದಲ್ಲಿ ಒಟ್ಟು 1,529 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ.ಹಾಂಗ್ ಕಾಂಗ್, ಚೀನಾ ಮತ್ತು ಸಿಂಗಾಪುರದ ಸಂಸ್ಥೆಗಳು ಅಗ್ರ 10ರಲ್ಲಿ ಸ್ಥಾನಗಳಿಸಿದ್ದು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿ ಭಾರತದ ಅತ್ಯುತ್ತಮ ವಿಶ್ವವಿದ್ಯಾಲಯ ಎಂದು ಗುರುತಿಸಲ್ಪಟ್ಟಿದೆ. ಇದು 59 ನೇ ಸ್ಥಾನದಲ್ಲಿದೆ. ಕಳೆದ ವರ್ಷ 44 ನೇ ಸ್ಥಾನದಲ್ಲಿದ್ದ ದೆಹಲಿ ಐಐಟಿ 15 ಸ್ಥಾನಗಳ ಕುಸಿತ ಕಂಡಿದೆ. ಬಾಂಬೆ ಐಐಟಿ ಈ ವರ್ಷ 48 ರಿಂದ 71ನೇ ಸ್ಥಾನಕ್ಕೆ ಕುಸಿದಿದೆ.

Leave a Reply

Your email address will not be published. Required fields are marked *

error: Content is protected !!