ಉದಯವಾಹಿನಿ, ಲಖನೌ: ಊಟಕ್ಕೆ ಹೆಚ್ಚುವರಿ ಹಣ ನೀಡಲು ನಿರಾಕರಿಸಿದ್ದಕ್ಕೆ ಆಹಾರ ಮಾರಾಟಗಾರನೊಬ್ಬ ರೈಲು ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಝಾನ್ಸಿ ನಿಲ್ದಾಣದಲ್ಲಿ ಅಂಡಮಾನ್ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕ್ಯಾಮರಾದಲ್ಲಿ ಸೆರೆಯಾಗಿರುವ ಆಘಾತಕಾರಿ ವಿಡಿಯೊದಲ್ಲಿ, ರೈಲು ಬೋಗಿಯೊಳಗೆ ಮಾರಾಟಗಾರನು ಪ್ರಯಾಣಿಕನನ್ನು ಬೆಲ್ಟ್‌ನಿಂದ ಪದೇ ಪದೆ ಹೊಡೆಯುತ್ತಿರುವುದನ್ನು ನೋಡಬಹುದು. ಈ ದೃಶ್ಯವನ್ನು ಕಣ್ಣಾರೆ ನೋಡಿದ ಪ್ರಯಾಣಿಕರು ದಿಗ್ಭ್ರಮೆಗೊಂಡಿದ್ದಾರೆ. ಈ ಘಟನೆ ಆಗಸ್ಟ್‌ನಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವರದಿಗಳ ಪ್ರಕಾರ, ಮಧ್ಯಪ್ರದೇಶದ ಬಿನಾ ನಿವಾಸಿ ನಿಹಾಲ್ (25) ಎಂದು ಗುರುತಿಸಲಾದ ಪ್ರಯಾಣಿಕ ಹಲ್ಲೆಗೊಳಗಾದಾತ. ಆಗಸ್ಟ್ 25ರಂದು ತನ್ನ ಕುಟುಂಬದೊಂದಿಗೆ ಕತ್ರಾಗೆ ಪ್ರಯಾಣಿಸುತ್ತಿದ್ದ. ನಿಹಾಲ್ ರೈಲಿನಲ್ಲಿ ಸಸ್ಯಾಹಾರಿ ಊಟವನ್ನು ಆರ್ಡರ್ ಮಾಡಿದ್ದ. ಅವರಿಗೆ 130 ರೂ. ಬಿಲ್ ನೀಡಲಾಯಿತು. ಭಾರತೀಯ ರೈಲ್ವೆ ಪಟ್ಟಿ ಮಾಡಿದ ಅಧಿಕೃತ ದರ ರೂ. 110 ಎಂದು ಉಲ್ಲೇಖಿಸಲಾಗಿತ್ತು. ಇದಕ್ಕೆ ಅವರು ಆಕ್ಷೇಪಿಸಿದಾಗ, ಮಾರಾಟಗಾರ ಆರಂಭದಲ್ಲಿ ಅಲ್ಲಿಂದ ಹೊರಟುಹೋಗಿದ್ದಾನೆ. ನಂತರ ಇತರೆ ಪುರುಷರ ಗುಂಪಿನೊಂದಿಗೆ ಹಿಂತಿರುಗಿದ ಹಿಂಸಾತ್ಮಕವಾಗಿ ವರ್ತಿಸಿದ್ದಾನೆ.
ಮಾರಾಟಗಾರನು ತನ್ನ ಬೆಲ್ಟ್ ತೆಗೆದು ನಿಹಾಲ್ ಮೇಲೆ ಥಳಿಸಲು ಪ್ರಾರಂಭಿಸಿದನು. ಹೊಡೆಯದಂತೆ ಪದೇ ಪದೇ ಮನವಿ ಮಾಡಿದರೂ ಅದನ್ನು ನಿರ್ಲಕ್ಷಿಸಿದನು. ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗಿರುವ ಈ ಸಣ್ಣ ವಿಡಿಯೊದಲ್ಲಿ, ಭಯಭೀತರಾದ ಪ್ರಯಾಣಿಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ ಅವನನ್ನು ತಡೆಯಲು ವಿಫಲರಾದರು. ಆ ವ್ಯಕ್ತಿ ನಿಹಾಲ್‌ಗೆ ಬೆಲ್ಟ್‌ನಿಂದ ಹಲವು ಬಾರಿ ಹೊಡೆಯುವುದನ್ನು ತೋರಿಸುತ್ತದೆ.
