ಉದಯವಾಹಿನಿ, ದುಬೈ: ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ ಮತ್ತು ಛಾಯಾಗ್ರಾಹಕ ಅನುನಯ್ ಸೂದ್ ತಮ್ಮ 32ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಸಾಮಾಜಿಕ ಮಾಧ್ಯಮದಲ್ಲಿ ದೃಢಪಡಿಸಿದೆ. ದುಬೈನಲ್ಲಿ ವಾಸವಾಗಿರುವ ಅವರು, ಅಮೆರಿಕದ ಲಾಸ್ ವೇಗಸ್‍ನಲ್ಲಿ ನಿಧನರಾಗಿದ್ದಾರೆ. ಸಾವಿಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಆಗಿದ್ದ ಅನುನಯ್ ಅವರು, ಜಗತ್ತಿನ ಹಲವಾರು ದೇಶಗಳಿಗೆ ಪ್ರಯಾಣಿಸಿದ್ದರು. ನಂತರ ತಮ್ಮ ಪ್ರಯಾಣದ ಅನುಭವವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಈ ಮೂಲಕ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 1.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು. ಆದರೀಗ ಅವರ ನಿಧನವು, ಅನುನಯ್ ಫಾಲೋವರ್ಸ್‌ಗೆ ದಿಗ್ಭ್ರಮೆ ಮೂಡಿಸಿದೆ.
ಅನುನಯ್ ಕುಟುಂಬವು ನವೆಂಬರ್ 6, 2025ರಂದು ಮುಂಜಾನೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ಹೃದಯವಿದ್ರಾವಕ ಸುದ್ದಿಯನ್ನು ಹಂಚಿಕೊಂಡಿತು. ಈ ಕಷ್ಟದ ಸಮಯದಲ್ಲಿ ಅವರ ಗೌಪ್ಯತೆಯನ್ನು ಗೌರವಿಸುವಂತೆ ಅನುಯಾಯಿಗಳಲ್ಲಿ ಮನವಿ ಮಾಡಿತು. ಜನರು ಅವರ ಖಾಸಗಿ ಆಸ್ತಿಯ ಬಳಿ ಸೇರದಂತೆ ಮತ್ತು ಅವರ ಕುಟುಂಬ ಮತ್ತು ಪ್ರೀತಿಪಾತ್ರರನ್ನು ಸ್ಮರಿಸಿ ಪ್ರಾರ್ಥಿಸಬೇಕು ಎಂದು ಅವರು ವಿನಂತಿಸಿದರು. ಅನುನಯ್ ಸಾವಿಗೆ ಕಾರಣ ತಿಳಿದು ಬಂದಿಲ್ಲ.
ನಮ್ಮ ಪ್ರೀತಿಯ ಅನುನಯ್ ಸೂದ್ ಅವರ ನಿಧನದ ಸುದ್ದಿಯನ್ನು ಹಂಚಿಕೊಳ್ಳಲು ನಮಗೆ ತುಂಬಾ ದುಃಖವಾಗಿದೆ. ಈ ಕಷ್ಟದ ಸಮಯದಲ್ಲಿ ನಾವು ಗೌಪ್ಯತೆಯನ್ನು ದಯೆಯಿಂದ ಕೇಳುತ್ತೇವೆ. ವೈಯಕ್ತಿಕ ಆಸ್ತಿಯ ಬಳಿ ಯಾರೂ ಕೂಡ ಬರದಂತೆ ನಾವು ವಿನಮ್ರವಾಗಿ ವಿನಂತಿಸುತ್ತೇವೆ. ದಯವಿಟ್ಟು ಅವರ ಕುಟುಂಬ ಮತ್ತು ಪ್ರೀತಿಪಾತ್ರರನ್ನು ಪ್ರಾರ್ಥಿಸಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನುನಯ್ ಸೂದ್ ಅವರ ಕುಟುಂಬ ಮತ್ತು ಸ್ನೇಹಿತರು ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
