ಉದಯವಾಹಿನಿ, ನ್ಯೂಯಾರ್ಕ್: ತಡರಾತ್ರಿ ಅಮೆರಿಕದ ನ್ಯೂಯಾರ್ಕ್ ರಾಜ್ಯದ ದಿ ಬ್ರಾಂಕ್ಸ್ ಪ್ರದೇಶದಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ವಾಹನವೊಂದು ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಹಲವಾರು ಅಗ್ನಿಶಾಮಕ ದಳದ ಸಿಬ್ಬಂದಿ ಗಾಯಗೊಂಡರು ಮತ್ತು ನಿವಾಸಿಗಳು ಸುರಕ್ಷತೆಗಾಗಿ ಪರದಾಡಿದರು. 955 ವೆಸ್ಟ್‌ಚೆಸ್ಟರ್ ಅವೆನ್ಯೂ ಬಳಿ ಸ್ಫೋಟ ಸಂಭವಿಸಿದೆ. ಅಲ್ಲಿ ನಿಲ್ಲಿಸಿದ್ದ ಕಾರು ರಾತ್ರಿ 10.45 ರ ಸುಮಾರಿಗೆ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತು. ಬೆಂಕಿಯ ರೌದ್ರಾವತಾರದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸ್ಫೋಟದ ಪರಿಣಾಮವಾಗಿ ಭೀಕರ ಬೆಂಕಿ ಹೊತ್ತಿಕೊಂಡಿದ್ದು, ಅದು ಬೇಗನೆ ಹರಡಿದೆ. ವಾಹನ ಮತ್ತು ಹತ್ತಿರದ ಪ್ರದೇಶಗಳಲ್ಲಿ ಅಗ್ನಿ ವ್ಯಾಪಿಸಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿ ನಂದಿಸುವಾಗ ಕನಿಷ್ಠ ಐದು ಅಗ್ನಿಶಾಮಕ ದಳದ ಸಿಬ್ಬಂದಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನ್ಯೂಯಾರ್ಕ್ ನಗರದ ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಬೆಂಕಿಯನ್ನು ನಿಯಂತ್ರಿಸಲು ಮತ್ತು ಪಕ್ಕದ ಕಟ್ಟಡಗಳಿಗೆ ಹರಡುವುದನ್ನು ತಡೆಯಲು ಸಿಬ್ಬಂದಿ ದಟ್ಟ ಹೊಗೆ ಮತ್ತು ತೀವ್ರವಾದ ಶಾಖದ ನಡುವೆಯೂ ಕೆಲಸ ಮಾಡಿದರು. ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳು ಭೀತಿ ಮತ್ತು ಭೀಕರ ದೃಶ್ಯಗಳನ್ನು ವಿವರಿಸಿದರು. ಇಡೀ ಪ್ರದೇಶ ನಡುಗಿ ಹೋಗಿದೆ. ಅದು ನೋಡಲು ಚಲನಚಿತ್ರ ದೃಶ್ಯದಂತೆ ಕಂಡು ಬಂದರೂ, ನೈಜವಾಗಿಯೂ ಬೆಂಕಿ ಹೊತ್ತಿ ಉರಿಯುತ್ತಿತ್ತು. ಅಗ್ವಿಯ ಜ್ವಾಲೆಗಳು ಆಕಾಶದೆತ್ತರಕ್ಕೆ ಹಾರುವುದನ್ನು ನೋಡಿದ ಸ್ಥಳೀಯರು ನಿಜಕ್ಕೂ ಭೀತಿಗೊಂಡಿದ್ದಾರೆ.
