ಉದಯವಾಹಿನಿ, ಮಾಸ್ಕೋ: 19 ದಿನಗಳ ಹಿಂದೆ ರಷ್ಯಾದ ಉಫಾ ನಗರದಲ್ಲಿ ನಾಪತ್ತೆಯಾಗಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿಯ ಮೃತದೇಹ ಡ್ಯಾಮ್‌ ಒಂದರಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿಯನ್ನು ರಾಜಸ್ಥಾನದ ಲಕ್ಷ್ಮಣಗಢದ ಕಫನ್‌ವಾಡ ಗ್ರಾಮದ ನಿವಾಸಿ ಅಜಿತ್ ಸಿಂಗ್ ಚೌಧರಿ ಎಂದು ಗುರುತಿಸಲಾಗಿದೆ. 2023ರಲ್ಲಿ ಎಂಬಿಬಿಎಸ್ ಶಿಕ್ಷಣಕ್ಕಾಗಿ ಬಶ್ಕಿರ್ ರಾಜ್ಯದ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಸೇರಿದ್ದರು. ಅ.19 ರಂದು ಹಾಲು ಖರೀದಿಸಲು ಹೋಗುವುದಾಗಿ ಹೇಳಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ತನ್ನ ಹಾಸ್ಟೆಲ್‌ನಿಂದ ತೆರಳಿದ್ದರು. ಆದರೆ ವಾಪಸ್‌ ಬಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
19 ದಿನಗಳ ಹಿಂದೆ ನದಿ ದಂಡೆಯ ಬಳಿ ಚೌಧರಿಯವರ ಬಟ್ಟೆ, ಮೊಬೈಲ್ ಫೋನ್ ಮತ್ತು ಶೂಗಳು ಪತ್ತೆಯಾಗಿದ್ದವು. ಈಗ ಅವರ ಮೃತದೇಹ ವೈಟ್ ರಿವರ್ ಪಕ್ಕದಲ್ಲಿರುವ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ ಎಂದು ಅಲ್ವಾರ್ ಸರಸ್ ಡೈರಿ ಅಧ್ಯಕ್ಷ ನಿತಿನ್ ಸಾಂಗ್ವಾನ್ ತಿಳಿಸಿದ್ದಾರೆ. ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಚೌಧರಿ ಅವರ ಸಾವಿನ ಬಗ್ಗೆ ಅವರ ಕುಟುಂಬಕ್ಕೆ ಮಾಹಿತಿ ನೀಡಿದೆ.
ವಿದ್ಯಾರ್ಥಿಯ ಶವವನ್ನು ಭಾರತಕ್ಕೆ ತರಬೇಕು. ಅಹಿತಕರ ಘಟನೆ ಸಂಭವಿಸಿ ಆತ ಸಾವಿಗೀಡಾಗಿದ್ದಾನೆ. ಇದನ್ನು ಸಂಪೂರ್ಣ ಗಂಭೀರತೆಯಿಂದ ತನಿಖೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!