ಉದಯವಾಹಿನಿ, ತಿರುವನಂತಪುರಂ: ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀ ಕೃಷ್ಣನ ವರ್ಣ ಚಿತ್ರವನ್ನು ಉಡುಗೊರೆಯನ್ನಾಗಿ ನೀಡಿ ಗಮನ ಸೆಳೆದಿದ್ದ ಕೇರಳರದ ಮುಸ್ಲಿಂ ಮಹಿಳೆ ಜಸ್ನಾ ಸಲೀಂ ವಿರುದ್ಧ ಇದೀಗ ದೂರು ದಾಖಲಾಗಿದೆ. ”ತ್ರಿಶ್ಶೂರ್ ಜಿಲ್ಲೆಯ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದ ನಿಯಮ ಉಲ್ಲಂಘಿಸಿ ವಿಡಿಯೊ ಮಾಡಿದ ಆರೋಪದ ಮೇಲೆ ಜಸ್ನಾ ಸಲೀಂ ವಿರುದ್ದ ಶನಿವಾರ (ನವೆಂಬರ್ 8) ಪ್ರಕರಣ ದಾಖಲಿಸಲಾಗಿದೆʼʼ ಎಂದು ಗುರುವಾಯೂರು ದೇವಸ್ಥಾನದ ಪೊಲೀಸರು ತಿಳಿಸಿದ್ದಾರೆ.
ಸುದ್ದಿಸಂಸ್ಥೆ ಪಿಟಿಐ ವರದಿ ಪ್ರಕಾರ, ಇತ್ತೀಚೆಗೆ ದೇವಾಲಯದ ನಡಪಂದಲ್ (ದೇವಾಲಯದ ಪ್ರವೇಶ ದ್ವಾರ)ದಲ್ಲಿ ವಿಡಿಯೊ ಶೂಟ್ ನಡೆಸಿದ ಜಸ್ನಾ ಸಲೀಂ ಮತ್ತು ಈ ರೀಲ್ ಹಂಚಿಕೊಂಡ ಸೋಶಿಯಲ್ ಮೀಡಿಯಾ ಖಾತೆ ಹೊಂದಿದ ವ್ಯಕ್ತಿಯ ವಿರುದ್ಧ ಗುರುವಾಯೂರು ದೇವಾಲಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ನಡಪಂದಲ್‌ನಲ್ಲಿ ವಿಡಿಯೊ ಚಿತ್ರೀಕರಿಸುವುದು ಮತ್ತು ರೀಲ್ ಮಾಡುವುದನ್ನು ಕೇರಳ ಹೈಕೋರ್ಟ್ ನಿಷೇಧಿಸಿದೆ ಎಂದು ʼದಿ ಹಿಂದೂʼ ಪತ್ರಿಕೆ ತಿಳಿಸಿದೆ. ದೇವಾಲಯದ ಆಡಳಿತ ಅಧಿಕಾರಿಯ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಲಾಗಿದೆ.
ಜಸ್ನಾ ವಿರುದ್ಧ ಬಿಎನ್‌ಎಸ್‌ನ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ವರದಿ ತಿಳಿಸಿದೆ. ಶ್ರೀ ಕೃಷ್ಣನ ಪರಮ ಭಕ್ತೆಯಾಗಿರುವ ಜಸ್ನಾ ಸಲೀಂ ದೇವರ ಹಲವು ವರ್ಣಚಿತ್ರಗಳನ್ನು ರಚಿಸುವ ಮೂಲಕ ಗಮನ ಸೆಳೆದಿದ್ದಾರೆ. 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ತ್ರಿಶ್ಶೂರ್‌ಗೆ ಭೇಟಿ ನೀಡಿದ್ದಾಗ ಕೈಯಲ್ಲೇ ಬಿಡಿಸಿದ ಶ್ರೀ ಕೃಷ್ಣನ ವರ್ಣ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರು.
