ಉದಯವಾಹಿನಿ, ನವದೆಹಲಿ: ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಪ್ರಿಯಾಂಕಾ ವಾದ್ರಾ ಪರ ಬ್ಯಾಟಿಂಗ್ ಮಾಡಿದ ಬೆನ್ನಲ್ಲೇ ಪತಿ ರಾಬಾರ್ಟ್ ವಾದ್ರಾ ಅವರು ಪತ್ನಿಯ ಪರ ವಹಿಸಿ ಮಾತನಾಡಿ ಸಂಚಲನ ಮೂಡಿಸಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪ್ರಧಾನಿಯಾಗಿ ನೋಡಲು ಅನೇಕರು ಬಯಸುತ್ತಾರೆ. ರಾಜಕೀಯದಲ್ಲಿ ಅವರಿಗೆ ಉಜ್ವಲ ಭವಿಷ್ಯವಿದೆ ಎಂದಿದ್ದಾರೆ.
ಪ್ರಿಯಾಂಕಾ ಅವರ ಅಜ್ಜಿ (ಇಂದಿರಾ ಗಾಂಧಿ) ಅವರ ತಂದೆ (ರಾಜೀವ್ ಗಾಂಧಿ), ಸೋನಿಯಾ ಜಿ ಮತ್ತು ಅವರ ಸಹೋದರ ರಾಹುಲ್ ಗಾಂಧಿ ಅವರಿಂದ ಕೂಡ ಬಹಳಷ್ಟು ಕಲಿತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಜನರು ಅವರನ್ನು ಮೆಚ್ಚುತ್ತಾರೆ. ಅವರು ಮಾತನಾಡುವಾಗ ತಮ್ಮ ಹೃದಯದಿಂದ ಮಾತನಾಡುತ್ತಾರೆ ಎಂದು ಜನರು ಹೇಳುತ್ತಾರೆ ಎಂದು ಹೇಳಿದರು. ಇಂದಿರಾ ಗಾಂಧಿ ಅವರಂತೆ ಪ್ರಿಯಾಂಕಾ ಕೂಡ ಬಲಿಷ್ಠ ಪ್ರಧಾನಿಯಾಗುತ್ತಾರೆ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ವಾದ್ರಾ ಈ ಹೇಳಿಕೆ ನೀಡಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ವೋಟ್ ಕಳ್ಳತನ ಚರ್ಚೆಯಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ವಯನಾಡ್ ಸಂಸದೆಯಾಗಿರುವ ಪ್ರಿಯಾಂಕಾ ವಾದ್ರಾ ಮಾತನಾಡಿದ್ದರು. ಇಬ್ಬರ ಭಾಷಣವನ್ನು ನಾಯಕರು ತುಲನೆ ಮಾಡಿದಾಗ ಪ್ರಿಯಾಂಕಾ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರಿಂದ ಸಿಟ್ಟಿಗೆದ್ದು ರಾಹುಲ್ ವಿದೇಶಕ್ಕೆ ತೆರಳಿದ್ದಾರೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಪ್ರಿಯಾಂಕಾ ಪರ ಈಗ ಕೈ ನಾಯಕರು ಮಾತನಾಡುತ್ತಿದ್ದಾರೆ.
