ಉದಯವಾಹಿನಿ, ಸಾಂಬಾ: ಸೇನಾ ಶಿಬಿರದೊಳಗೆ ಗುಂಡಿನ ದಾಳಿಯಲ್ಲಿ ಓರ್ವ ಸೇನಾಧಿಕಾರಿ ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಓರ್ವ ಜವಾನ ನಾಪತ್ತೆಯಾಗಿದ್ದಾರೆ. ಮೃತ ಅಧಿಕಾರಿಯನ್ನು ರಿಯಾಸಿ ಜಿಲ್ಲೆಯ ನಿವಾಸಿ ಸುರ್ಜೀತ್ ಸಿಂಗ್ ಎಂದು ಗುರುತಿಸಲಾಗಿದೆ. ಭಯೋತ್ಪಾದಕರು ಈ ದಾಳಿ ನಡೆಸಿರುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಸಾಂಬಾ ಜಿಲ್ಲೆಯ ಸೇನಾ ಶಿಬಿರದೊಳಗೆ ನಡೆದ ಈ ದಾಳಿಯ ಹಿಂದಿನ ಕಾರಣವನ್ನು ಪತ್ತೆ ಹಚ್ಚಲು ತನಿಖೆ ತೀವ್ರಗೊಳಿಸಲಾಗಿದೆ.
ಈ ಕುರಿತು ಸೇನೆಯು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಬರಿ ಬ್ರಾಹ್ಮಣ ಸೇನಾ ಶಿಬಿರದೊಳಗೆ ನಡೆದ ಗುಂಡಿನ ದಾಳಿಯಲ್ಲಿ ಸೇನೆಯ ಕಿರಿಯ ಸುಬೇದಾರ್ ಸುರ್ಜೀತ್ ಸಿಂಗ್ ಸಾವನ್ನಪ್ಪಿದ್ದಾರೆ. ಮಂಗಳವಾರ ರಾತ್ರಿ ನಡೆದ ಈ ದಾಳಿಗೆ ಕಾರಣವನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ. ಮೃತರ ಕುಟುಂಬದೊಂದಿಗೆ ಭಾರತೀಯ ಸೇನೆಯು ದೃಢವಾಗಿ ನಿಂತಿದೆ. ಈ ದುಃಖದ ಸಮಯದಲ್ಲಿ ಅವರಿಗೆ ಅಚಲವಾದ ಬೆಂಬಲವನ್ನು ನೀಡುತ್ತದೆ ಎಂದು ಸೇನೆಯು ತಿಳಿಸಿದೆ. ಸೇನಾ ಶಿಬಿರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಯೋತ್ಪಾದಕರ ಸಂಪರ್ಕವನ್ನು ತಳ್ಳಿಹಾಕಲಾಗಿದೆ. ಆದರೂ ದಾಳಿಯ ಕುರಿತು ಸಕ್ರಿಯವಾಗಿ ತನಿಖೆ ನಡೆಸಲಾಗುತ್ತದೆ.
ಸಾಂಬಾ ಜಿಲ್ಲೆಯ ಬರಿ ಬ್ರಾಹ್ಮಣ ಶಿಬಿರದಲ್ಲಿ ನಡೆದ ಗುಂಡು ಹಾರಾಟದಲ್ಲಿ ಕರ್ತವ್ಯದಲ್ಲಿದ್ದ ಕಿರಿಯ ಅಧಿಕಾರಿ ಸುಬೇದಾರ್ ಸುರ್ಜೀತ್ ಸಿಂಗ್ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಬಂದ ತಕ್ಷಣ ಅಲ್ಲಿಗೆ ಧಾವಿಸಿದ ರಕ್ಷಣಾ ತಂಡ ಅವರನ್ನು ಕೂಡಲೇ ಹತ್ತಿರದ ವೈದ್ಯಕೀಯ ಸೌಲಭ್ಯ ಕೇಂದ್ರಕ್ಕೆ ಕರೆದುಕೊಂಡು ಹೋಯಿತು. ಆದರೆ ಅಲ್ಲಿಗೆ ಹೋಗುವ ದಾರಿ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
