ಉದಯವಾಹಿನಿ, ಬಳ್ಳಾರಿ: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 4.5 ಕೆಜಿ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಎಸ್‌ಐಟಿ ಟೀಂ ಬಳ್ಳಾರಿಯ ರೊದ್ದಂ ಜ್ಯುವೆಲ್ಸ್ ಅಂಗಡಿಗೆ ದಾಳಿ ನಡೆಸಿ ಶೋಧ ನಡೆಸಿದೆ.
ಈಗಾಗಲೇ ಚಿನ್ನ ಕಳ್ಳತನ ಪ್ರಕರಣದಲ್ಲಿ ರೊದ್ದಂ ಜ್ಯುವೆಲ್ಸ್ ಶಾಪ್ ಮಾಲೀಕ ಗೋವರ್ಧನ್ ಅವರನ್ನ ಬಂಧಿಸಲಾಗಿದೆ. ಈ ಹಿಂದೆಯೂ ಅಕ್ಟೋಬರ್ 24ರಂದು ರೊದ್ದಂ ಜ್ಯುವೆಲ್ಸ್ ಶಾಪ್ ಮೇಲೆ ಕೇರಳ ಎಸ್‌ಐಟಿ ಟೀಂ ದಾಳಿ ಮಾಡಿತ್ತು. ಇದೀಗ ಮತ್ತೆ ದಾಳಿ ಮಾಡಿದ ಎಸ್‌ಐಟಿ ಅಧಿಕಾರಿಗಳು, ಜ್ಯುವೆಲ್ಲರಿ ಶಾಪ್ ಡೋರ್ ಕ್ಲೋಸ್ ಮಾಡಿಕೊಂಡು ತಪಾಸಣೆ ನಡೆಸಿದ್ದಾರೆ.
ಕಳೆದ ಎರಡು ದಿನದ ಹಿಂದೆ ರೊದ್ದಂ ಜ್ಯುವೆಲ್ಸ್ ಮಾಲೀಕ ಗೋವರ್ಧನ್ ಅವರನ್ನು ಬಂಧಿಸಲಾಗಿದೆ. ಬಳಿಕ ವಿಚಾರಣೆ ವೇಳೆ ಗೋವರ್ಧನ್‌ರಿಂದ ಎಸ್‌ಐಟಿ ಅಧಿಕಾರಿಗಳು ಹಲವು ವಿಷಯ ಬಾಯಿಬಿಡಿಸಿದ್ದಾರೆ. ಗೋವರ್ಧನ್ ನೀಡಿದ ಮಾಹಿತಿ ಆಧಾರದ ಮೇಲೆ ಮತ್ತೆ ಗೋವರ್ಧನ್ ಅವರ ಜ್ಯುವೆಲ್ಲರಿ ಶಾಪ್ ಮೇಲೆ ದಾಳಿ ಮಾಡಿ, ಮಾಹಿತಿ ಕಲೆ ಹಾಕಿದ್ದಾರೆ. ಜ್ಯುವೆಲ್ಲರಿ ಶಾಪ್‌ನಲ್ಲಿರುವ ಹತ್ತು ಸಿಬ್ಬಂದಿಗಳ ವಿಚಾರಣೆ ಮಾಡಿದ ಎಸ್‌ಐಟಿ ಅಧಿಕಾರಿಗಳು, ಗೋವರ್ಧನ್ ಅವರ ಹೇಳಿಕೆ ಹಾಗೂ ಅವರ ಸಿಬ್ಬಂದಿ ಹೇಳಿಕೆ ತಾಳೆ ಹಾಕಿ, ಮಾಹಿತಿ ಸಂಗ್ರಹಿಸಿ ವಾಪಸ್ ತೆರಳಿದ್ದಾರೆ.
