ಉದಯವಾಹಿನಿ, ನವದೆಹಲಿ : ಪಾಕಿಸ್ತಾನ ಪರಮಾಣು ಪರೀಕ್ಷೆಯನ್ನು ಪುನರಾರಂಭಿಸಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ನೀಡಿದ್ದರು. ಈ ರೀತಿ ರಹಸ್ಯ ಮತ್ತು ಕಾನೂನುಬಾಹಿರವಾದ ಚಟುವಟಿಕೆಗಳನ್ನು ನಡೆಸುವುದು ಪಾಕಿಸ್ತಾನದ ಇತಿಹಾಸದಲ್ಲೇ ಇದೆ ಎಂದು ವಿದೇಶಾಂಗ ಸಚಿವಾಲಯ (MEA) ಹೇಳಿದೆ. “ರಹಸ್ಯ ಮತ್ತು ಅಕ್ರಮ ಪರಮಾಣು ಚಟುವಟಿಕೆಗಳನ್ನು ನಡೆಸುವುದು ಪಾಕಿಸ್ತಾನದಲ್ಲಿ ಹೊಸತೇನಲ್ಲ. ಅದು ದಶಕಗಳಿಂದ ಕಳ್ಳಸಾಗಣೆ, ರಫ್ತು ನಿಯಂತ್ರಣ ಉಲ್ಲಂಘನೆ, ರಹಸ್ಯ ಪಾಲುದಾರಿಕೆಗಳನ್ನು ನಡೆಸುತ್ತಿದೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
“ಈ ರೀತಿ ಪಾಕಿಸ್ತಾನದ ಅಕ್ರಮ ಚಟುವಟಿಕೆಗಳ ಬಗ್ಗೆ ಭಾರತ ಯಾವಾಗಲೂ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪರಮಾಣು ಪರೀಕ್ಷೆಯ ಬಗ್ಗೆ ಯುಎಸ್ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಯನ್ನು ನಾವು ಗಮನಿಸಿದ್ದೇವೆ” ಎಂದು ಜೈಸ್ವಾಲ್ ಅವರು ಹೇಳಿದ್ದಾರೆ.
