ಉದಯವಾಹಿನಿ, ಟೆಲ್ ಅವೀವ್: ಫೆಲೆಸ್ತೀನ್ ವಿರುದ್ಧದ ದಾಳಿಗಳನ್ನು ತಾನು ತೀವ್ರಗೊಳಿಸುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿದೆ. ಹಮಾಸ್ ಸಂಪೂರ್ಣವಾಗಿ ನಾಶವಾಗುವವರೆಗೆ ಗಾಝಾದ ಮೇಲಿನ ದಾಳಿಯು ಮುಂದುವರಿಯಲಿದೆಯೆಂದು ಇಸ್ರೇಲಿ ರಕ್ಷಣಾ ಸಚಿವ ಇಸ್ರಾಯೇಲ್ ಕಾಟ್ಸ್ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲಿ ನಿಯಂತ್ರಿತ ಗಾಝಾದಲ್ಲಿ ಹಮಾಸ್ ನಿರ್ಮಿಸಿರುವ ಸುರಂಗಮಾರ್ಗಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗುವುದು ಎಂದವರು ಹೇಳಿದ್ದಾರೆ.
ಇಸ್ರೇಲ್ ಆಕ್ರಮಿತ ಗಾಝಾಪಟ್ಟಿಯಲ್ಲಿ ಸಿಲುಕಿಕೊಂಡಿರುವ ಹಮಾಸ್ ಬಂಡುಕೋರರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಬೇಕೆಂದು ಅಮೆರಿಕ ಆಗ್ರಹಿಸಿದೆಯೆಂಬ ವರದಿಗಳ ನಡುವೆ ಕಾಟ್ಸ್ ಅವರು ಈ ಹೇಳಿಕೆ ನೀಡಿದ್ದಾರೆ. ರಫಾ ಪ್ರದೇಶದಲ್ಲಿ ಸುಮಾರು 200 ಮಂದಿ ಹಮಾಸ್ ಸದಸ್ಯರು ಅವಿತುಕೊಂಡಿದ್ದಾರೆಂದು ಇಸ್ರೇಲ್ ಅಂದಾಜಿಸಿದೆ. ಗಾಝಾದಲ್ಲಿ ಬಚ್ಚಿಟ್ಟುಕೊಂಡಿರುವ ಹಮಾಸ್ ಹೋರಾಟಗಾರರನ್ನು ಸುರಕ್ಷಿತವಾಗಿ ವಾಪಾಸಾಗಲು ಬಿಡುವುದಿಲ್ಲವೆಂದು ಬೆಂಜಮಿನ್ ನೆತನ್ಯಾಹು ಈ ಹಿಂದೆ ತಿಳಿಸಿದ್ದರು.
