ಉದಯವಾಹಿನಿ, ಟೆಕ್ಸಾಸ್: ಆಂಧ್ರ ಪ್ರದೇಶ ಮೂಲದ 23 ವರ್ಷದ ವಿದ್ಯಾರ್ಥಿನಿಯೊಬ್ಬರು ಅಮೆರಿಕದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.ಅಮೆರಿಕದ ಟೆಕ್ಸಾಸ್‌ನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ 23 ವರ್ಷದ ಭಾರತೀಯ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಕುಟುಂಬ ಮತ್ತು ಸ್ನೇಹಿತರನ್ನು ತೀವ್ರ ಆಘಾತಕ್ಕೆ ದೂಡಿದೆ. ಆಂಧ್ರಪ್ರದೇಶದ ನಿವಾಸಿಯಾಗಿದ್ದ ರಾಜ್ಯಲಕ್ಷ್ಮಿ (ರಾಜಿ) ಯರ್ಲಗಡ್ಡ ಎಂಬ ವಿದ್ಯಾರ್ಥಿನಿ ಇತ್ತೀಚೆಗೆ ಟೆಕ್ಸಾಸ್ ಎ & ಎಂ ವಿಶ್ವವಿದ್ಯಾಲಯ-ಕಾರ್ಪಸ್ ಕ್ರಿಸ್ಟಿಯಿಂದ ಪದವಿ ಪಡೆದಿದ್ದು, ಅಮೆರಿಕದಲ್ಲಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.ರಾಜ್ಯಲಕ್ಷ್ಮಿ ಯರ್ಲಗಡ್ಡ ನವೆಂಬರ್ 7 ರಂದು ನಿಧನರಾಗಿದ್ದು, ಅವರ ಸೋದರಸಂಬಂಧಿ ಚೈತನ್ಯ ವೈವಿಕೆ ಪ್ರಕಾರ, ಕಳೆದ ಎರಡು ಮೂರು ದಿನಗಳಿಂದ ರಾಜ್ಯಲಕ್ಷ್ಮಿ ತೀವ್ರ ಕೆಮ್ಮು ಮತ್ತು ಎದೆ ನೋವಿನಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.
“ದುರಂತವೆಂದರೆ, ನವೆಂಬರ್ 7, 2025 ರ ಬೆಳಿಗ್ಗೆ, ಅಲಾರಾಂ ಬಾರಿಸಿದಾಗ ಅವರು ಎಚ್ಚರಗೊಳ್ಳಲಿಲ್ಲ, ಇದು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಭೀತಿ ಮೂಡಿಸಿತು” ಎಂದು ಸೋದರಸಂಬಂಧಿ ಹೇಳಿದರು. ನಂತರ ಅವರ ಸ್ನೇಹಿತರು ಅವರು ನಿದ್ರೆಯಲ್ಲಿಯೇ ನಿಧನರಾಗಿದ್ದಾರೆ ಎಂದು ಕಂಡುಕೊಂಡರು ಎಂದು ಹೇಳಿದರು.
ಪ್ರಸ್ತುತ ಮೃತ ರಾಜ್ಯಲಕ್ಷ್ಮಿ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪರೀಕ್ಷೆಯು ಅಮೆರಿಕದಲ್ಲಿ ಸಾವಿಗೆ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿದೆ ಎನ್ನಲಾಗಿದೆ.
