
ಉದಯವಾಹಿನಿ, ಆಕ್ಲೆಂಡ್: ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಮತ್ತೊಮ್ಮೆ ಖಲಿಸ್ತಾನಿ ಉಗ್ರಗಾಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಅವರ ಮುಂಬರುವ ಸಂಗೀತ ಕಚೇರಿಗೆ ಖಲಿಸ್ತಾನ್ ಪರ ಗುಂಪುಗಳಿಂದ ಬೆದರಿಕೆ ಇದೆ ಎಂದು ವರದಿಯಾಗಿದೆ. ಹೌದು, ಪರ್ತ್‌ನಲ್ಲಿ ನಡೆದ ತಮ್ಮ ಸಂಗೀತ ಕಚೇರಿಯಲ್ಲಿ ಇದೇ ರೀತಿಯ ಅಡಚಣೆಗಳು ವರದಿಯಾದ ಕೆಲವೇ ದಿನಗಳಲ್ಲಿ ಗಾಯಕ-ನಟ ದಿಲ್ಜಿತ್ ದೋಸಾಂಜ್ ಅವರಿಗೆ ಖಲಿಸ್ತಾನಿ ಬೆಂಬಲಿಗರಿಂದ ಹೊಸ ಬೆದರಿಕೆಗಳು ಎದುರಾಗಿವೆ. ಅವರ ಸಂಗೀತ ಪ್ರದರ್ಶನದ ಸಮಯದಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಮೊಳಗಿಸಲಾಯಿತು. ಇದೀಗ ಆಕ್ಲೆಂಡ್‌ನಲ್ಲಿ ಅವರ ಮುಂದಿನ ಪ್ರದರ್ಶನಕ್ಕೆ ಈಗ ಎಚ್ಚರಿಕೆ ನೀಡಲಾಗಿದೆ.
ಅಮೆರಿಕ ಮೂಲದ ಉಗ್ರಗಾಮಿ ಗುರುಪತ್ವಂತ್ ಸಿಂಗ್ ಪನ್ನುನ್ ನೇತೃತ್ವದ ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ (SFJ) ನಿಂದ ಈ ಬೆದರಿಕೆಗಳು ಬರುತ್ತಿವೆ. ಈ ಸಂಘಟನೆಯು ಈ ಹಿಂದೆಯೂ ಗಾಯಕನನ್ನು ಗುರಿಯಾಗಿಸಿಕೊಂಡಿತ್ತು. ಹೆಚ್ಚುತ್ತಿರುವ ಒತ್ತಡದ ಹೊರತಾಗಿಯೂ, ದೋಸಾಂಜ್ ಇದರ ತಲೆಕೆಡಿಸಿಕೊಳ್ಳುತ್ತಿಲ್ಲ. ಅವರು ತಮ್ಮ ಸಂಗೀತ ಕಚೇರಿಯ ಹರ್ಷಚಿತ್ತದಿಂದ ಕೂಡಿದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ.
