ಉದಯವಾಹಿನಿ, ಇಸ್ಲಾಮಾಬಾದ್: ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟಗೊಂಡ ಪ್ರಕರಣದ ಬೆನ್ನಲ್ಲೇ ವಿಡಿಯೋವೊಂದು ಬಹಿರಂಗವಾಗಿದೆ. ಆಪರೇಷನ್ ಸಿಂಧೂರದ ಪ್ರತೀಕಾರ ತೀರಿಸಿಕೊಳ್ಳಲು ಬಾಂಗ್ಲಾದೇಶದ ಮೂಲಕ ಭಾರತದ ಮೇಲೆ ದಾಳಿ ನಡೆಸುತ್ತೇವೆ ಎಂದು ಲಷ್ಕರ್-ಎ-ತೈಬಾ ಉಗ್ರ ಸೈಫುಲ್ಲಾ ಸೈಫ್ ಬೆದರಿಕೆ ಹಾಕಿದ್ದ ವಿಡಿಯೋವೊಂದು ಹರಿದಾಡುತ್ತಿದೆ.
ಅ.30ರಂದು ಪಾಕಿಸ್ತಾನದ ಖೈರ್‌ಪುರ್ ತಮೇವಾಲಿಯಲ್ಲಿ ನಡೆದ ರ‍್ಯಾಲಿಯ ಸಂದರ್ಭದಲ್ಲಿ ತೆಗೆದಿದ್ದ ವಿಡಿಯೋವೊಂದು ಸದ್ಯ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋದಲ್ಲಿ ಎಲ್‌ಇಟಿ ಉಗ್ರ ಸೈಫುಲ್ಲಾ ಸೈಫ್, ಹಫೀಜ್ ಸಯೀದ್ ಸುಮ್ಮನೆ ಕುಳಿತಿಲ್ಲ, ಬಾಂಗ್ಲಾದೇಶದ ಮೂಲಕ ಭಾರತದ ಮೇಲೆ ದಾಳಿ ಮಾಡಲು ತಯಾರಿ ನಡೆಸುತ್ತಿದ್ದಾನೆ. ಆಪರೇಷನ್ ಸಿಂಧೂರದ ಪ್ರತೀಕಾರ ತೀರಿಸಿಕೊಳ್ಳಲು ಬಾಂಗ್ಲಾದೇಶದಲ್ಲಿ ಎಲ್‌ಇಟಿ ಸಂಘಟನೆ ಸಕ್ರಿಯವಾಗಿದೆ. ಈಗ ಅಮೆರಿಕ ನಮ್ಮೊಂದಿಗಿದೆ. ಬಾಂಗ್ಲಾದೇಶ ಪಾಕಿಸ್ತಾನಕ್ಕೆ ಹತ್ತಿರವಾಗುತ್ತಿದೆ ಎಂದು ಹೇಳಿದ್ದಾನೆ.
