ಉದಯವಾಹಿನಿ, ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ತಾನ ಸದ್ಯ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಭಾರತ ರಾಷ್ಟ್ರವ್ಯಾಪಿ ನಾಗರಿಕ ರಕ್ಷಣಾ ಮಾಕ್ ಡ್ರಿಲ್‌ಗಳನ್ನು ಆಯೋಜಿಸಿತ್ತು. ಇದೀಗ ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ಸ್ಪೋಟ ಪ್ರಕರಣದಿಂದಾಗಿ ಮತ್ತೆ ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಫೋಟದಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ಈ ದುಷ್ಕೃತ್ಯದಲ್ಲಿ, 20ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ಪಾಕಿಸ್ತಾನ ನೋಟಮ್ ಜಾರಿ ಮಾಡಿದ್ದು, ಪಾಕಿಸ್ತಾನದಲ್ಲಿ ಹೈಅಲರ್ಟ್ ಘೋಷಣೆಯನ್ನು ಮಾಡಲಾಗಿದೆ. ವಾಯುಪಡೆ ಮತ್ತು ನೌಕಾಪಡೆಗಳಿಗೆ ಸನ್ನದ್ದ ಸ್ಥಿತಿಯಲ್ಲಿ ಇರುವಂತೆ ಸೂಚಿಸಿದ್ದು, ವಾಯುಪಡೆಗೆ ರೆಡ್ ಹೈಅಲರ್ಟ್ ಇರುವಂತೆ ಪಾಕಿಸ್ತಾನ ಆದೇಶಿಸಿದೆ. ಬಿಗಿ ಭದ್ರತೆಯನ್ನು ಗಡಿಭಾಗದ ಪ್ರದೇಶಗಳಲ್ಲಿ ಹೆಚ್ಚಿಸಲಾಗಿದೆ ಎಂದು ವರದಿಯಾಗಿದ್ದು, ಪಾಹಲಗಾಮ್ ಭಯೋತ್ಪಾದಕ ದಾಳಿ ನಡೆಸಿ ಭಾರತದಿಂದ ಪೆಟ್ಟು ತಿಂದಿದ್ದ ಪಾಕಿಸ್ತಾನ ಹೆದರಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಮೂಲಗಳ ಪ್ರಕಾರ, ಪಾಕಿಸ್ತಾನದ ಸೇನಾಪಡೆಗಳು, ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆ ಪ್ರದೇಶಗಳಿಗೆ ಹೈ ಅಲರ್ಟ್ ಘೋಷಿಸಲಾಗಿದ್ದು, ಪಾಕಿಸ್ತಾನದ ಸೆಂಟ್ರಲ್ ಕಮಾಂಡ್ ಎಲ್ಲ ಸೇನಾಪಡೆಗಳಿಗೆ “ಮುಂದೆ ನಡೆಯುವ ಬೆಳವಣಿಗೆಗಳಿಗೆ ಸಿದ್ಧರಾಗಿ” ಎಂಬ ಆದೇಶವನ್ನು ನೀಡಿದೆ.
