ಉದಯವಾಹಿನಿ, ಕೋಲಾರ: ಇಡೀ ದೇಶದ ಗಮನ ಸೆಳೆದಿದ್ದ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಕಾರ್ಯ ಸಾಕಷ್ಟು ಕುತೂಹಲಗಳ ನಡುವೆ ಮುಗಿದಿದ್ದು, ಸತತವಾಗಿ ಹನ್ನೆರಡು ಗಂಟೆಗಳ ಕಾಲ ನಡೆದ ಮರು ಎಣಿಕೆ ಕಾರ್ಯದಲ್ಲಿ ಅಭ್ಯರ್ಥಿಗಳಿಗೆ ಇದ್ದ ಗೊಂದಲವನ್ನು ಬಹುತೇಕ ನಿವಾರಣೆ ಮಾಡಲಾಗಿದೆ. ಕಳೆದ ಫಲಿತಾಂಶವೇ ಯತಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ.
ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮರು ಮತ ಎಣಿಕೆ ಕೋರಿ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಹೈಕೋರ್ಟ್ ಮೊರೆ ಹೋಗಿದ್ದರು. ಎರಡೂವರೆ ವರ್ಷಗಳ ಕಾಲ ವಿಚಾರಣೆ ನಡೆಸಿದ ಹೈಕೋರ್ಟ್ ಮರು ಎಣಿಕೆಗೆ ಆದೇಶ ಮಾಡಿ ನಂತರ ಹಾಲಿ ಶಾಸಕರನ್ನು ಅಸಿಂಧು ಮಾಡಿತ್ತು. ಅಸಿಂಧು ಅದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಶಾಸಕ ನಂಜೇಗೌಡ ಅವರಿಗೆ ಅಸಿಂಧು ಆದೇಶ ತಡೆಯಾಜ್ಞೆ ನೀಡಿ ಮರು ಎಣೆಕೆಗೆ ಆದೇಶಿಸಿತ್ತು.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿ ನೇತೃತ್ವದಲ್ಲಿ ಮರು ಎಣಿಕೆ ಕಾರ್ಯ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮರು ಎಣಿಕೆ ಕಾರ್ಯ ಸತತವಾಗಿ ರಾತ್ರಿ 8 ಗಂಟೆವರೆಗೆ ನಡೆಯಿತು. ಮೊದಲು ಪೋಸ್ಟಲ್ ಬ್ಯಾಲೆಟ್ ಎಣಿಕೆ ಮಾಡಿ ನಂತರ ಇವಿಎಂಗಳ ಎಣಿಕೆ ಕಾರ್ಯ ನಡೆಯಿತು. ಅಭ್ಯರ್ಥಿಗಳ ಸಮ್ಮುಖದಲ್ಲಿ ಅವರ ಎಲ್ಲಾ ಗೊಂದಲ ಅನುಮಾನಗಳನ್ನು ಪರಿಹರಿಸಿದ ನಂತರ ಎಣಿಕೆ ಕಾರ್ಯ ನಡೆಸಲಾಗುತ್ತಿತ್ತು.ಇನ್ನು ರಾಜ್ಯ ಚುನಾವಣಾ ಆಯೋಗ ಮತ ಎಣಿಕೆ ಮೇಲೆ ಹದ್ದಿನ ಕಣ್ಣಿಟ್ಟು ಪ್ರತಿ ಸುತ್ತಿನ ಎಣಿಕೆಯ ಮಾಹಿತಿ ಪಡೆಯುತ್ತಿತ್ತು. ರಾಜ್ಯ ಚುನಾವಣಾ ಆಯೋಗದ ಸೂಚನೆ ನಂತರವೇ ಪ್ರತಿ ಸುತ್ತಿನ ಎಣಿಕೆ ಕಾರ್ಯ ಮಾಡಲಾಗಿದೆ.
