ಉದಯವಾಹಿನಿ, ಜೆರುಸಲೇಂ: ದೆಹಲಿ ಕಾರು ಬಾಂಬ್ ಸ್ಫೋಟ ಘಟನೆಯನ್ನು ಖಂಡಿಸಿರುವ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಭಾರತದ ಭಯೋತ್ಪಾದನಾ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
“ಆತ್ಮೀಯ ಗೆಳೆಯ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಭಾರತದ ಧೈರ್ಯಶಾಲಿ ಜನರಿಗೆ ಸಾರಾ (ನೆತನ್ಯಾಹು ಪತ್ನಿ) ಮತ್ತು ನಾನು ಮೆಚ್ಚುಗೆ ಸೂಚಿಸುತ್ತೇವೆ. ಭೀಕರ ಭಯೋತ್ಪಾದಕ ದಾಳಿಯನ್ನು ಎದುರಿಸಿಯ ಧೈರ್ಯವಾಗಿ ನಿಂತಿರುವ ಭಾರತ ನಿಜಕ್ಕೂ ಜಗತ್ತಿಗೆ ಪ್ರೇರಣೆಯಾಗಿದೆ. ದೆಹಲಿ ಸ್ಪೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಇಸ್ರೇಲ್ ಜನರು ಆಳವಾದ ಸಂತಾಪವನ್ನು ಸೂಚಿಸಿದ್ದಾರೆ. ಈ ಸಮಯದಲ್ಲಿ ಇಸ್ರೇಲ್ ದುಃಖ ಮತ್ತು ಶಕ್ತಿಯಲ್ಲಿ ನಿಮ್ಮೊಂದಿಗೆ ಬಲವಾಗಿ ನಿಂತಿದೆ” ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
“ಭಾರತ ಮತ್ತು ಇಸ್ರೇಲ್ ಪ್ರಾಚೀನ ನಾಗರಿಕತೆಗಳಾಗಿದ್ದು, ಅವು ಭಯೋತ್ಪಾದನೆ ಎಂಬ ಒಂದೇ ರೀತಿಯ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿವೆ. ಆದರೆ ಈ ಹೋರಾಟದಲ್ಲಿ ಅಂತಿಮ ಜಯ ಎರಡೂ ರಾಷ್ಟ್ರಗಳದ್ದಾಗಲಿದೆ. ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಭಾರತ ಮತ್ತು ಇಸ್ರೇಲ್‌ಗಳೆರೆಡೂ ಪರಸ್ಪರ ಹೆಗಲು ಕೊಟ್ಟು ಮುನ್ನಡೆಯಲಿವೆ” ಎಂದು ಇಸ್ರೇಲ್ ಪ್ರಧಾನಿ ಭರವಸೆಯ ಮಾತುಗಳನ್ನಾಡಿದ್ದಾರೆ.
