ಉದಯವಾಹಿನಿ, ಪಾಟ್ನಾ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿ ವಿರೋಧ ಪಕ್ಷಗಳನ್ನು ಧೂಳೀಪಟ ಮಾಡಿರುವ ಎನ್‌ಡಿಎ, ಬಿಹಾರದಲ್ಲಿ ಇದೇ 20ರಂದು ಸರ್ಕಾರ ರಚನೆ ಮಾಡಲಿದ್ದು, ಮುಖ್ಯಮಂತ್ರಿ ಯಾಗಿ 10ನೇ ಬಾರಿಗೆ ನಿತೀಶ್‌ಕುಮಾರ್‌ ಅಧಿಕಾರ ಸ್ವೀಕರಿಸಲಿದ್ದಾರೆ.ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆಯಲಿರುವ ವರ್ಣರಂಚಿತ ಸಮಾರಂಭದಲ್ಲಿ ಜೆಡಿಯು ಮುಖಂಡ ನಿತೀಶ್‌ಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವರು. ಜೊತೆಗೆ ಬಿಜೆಪಿ ಹಾಗು ಎಲ್‌ಜೆಪಿಯಿಂದ ತಲಾ ಒಬ್ಬರು ಉಪಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರಮೋದಿ ಆಗಮಿಸಲಿದ್ದು, ಬಿಜೆಪಿ ಹಾಗೂ ಎನ್‌ಡಿಎ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಕೂಡ ಭಾಗವಹಿಸಲಿದ್ದಾರೆ.ಮೂಲಗಳ ಪ್ರಕಾರ ಬಿಜೆಪಿಗೆ ಸಚಿವ ಸಂಪುಟದಲ್ಲಿ 15ರಿಂದ 16 ಸ್ಥಾನ, ಜೆಡಿಯುಗೆ 14 ಸ್ಥಾನ, ಎಲ್‌ಜೆಪಿಗೆ 3, ಆರ್‌ಎಲ್‌ಎಂ ಮತ್ತು ಎಚ್‌ಎಎಂಗೆ ತಲಾ ಒಂದು ಸ್ಥಾನ ದೊರಕುವ ಸಂಭವವಿದೆ.
ನಿತೀಶ್‌ಕುಮಾರ್‌ ಅವರನ್ನೇ ಮುಂದಿನ ಮುಖ್ಯಮಂತ್ರಿ ಮಾಡಲು ಎನ್‌ಡಿಎ ಮಿತ್ರಪಕ್ಷಗಳು ಸರ್ವಸಮತದ ಒಪ್ಪಿಗೆಯನ್ನು ಸೂಚಿಸಿವೆ. ಈ ವಿಷಯದಲ್ಲಿ ಯಾವುದೇ ಒಬ್ಬ ಶಾಸಕರೂ ಕೂಡ ಅಪಸ್ವರ ತೆಗೆದಿಲ್ಲ.ಮಂಗಳವಾರ ಔಪಚಾರಿಕವಾಗಿ ಶಾಸಕಾಂಗ ಸಭೆ ನಡೆಯಲಿದ್ದು, ನಿತೀಶ್‌ಕುಮಾರ್‌ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಿದ್ದಾರೆ. ನಂತರ ಸರ್ಕಾರ ರಚನೆಗೆ ವಿದ್ಯುಕ್ತವಾಗಿ ಎನ್‌ಡಿಎ ಹಕ್ಕು ಮಂಡಿಸಲಿದೆ. 20ರಂದು ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಶಾಸಕಾಂಗ ಪಕ್ಷದ ನಾಯಕರು ರಾಜ್ಯಪಾಲರಿಗೆ ಶಾಸಕರ ಬೆಂಬಲದ ಪತ್ರಗಳನ್ನು ನೀಡಲಿದ್ದಾರೆ.ಇದಕ್ಕೂ ಮುನ್ನ ನಿತೀಶ್‌ಕುಮಾರ್‌ ಅವರು ತಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!