ಉದಯವಾಹಿನಿ, ನ್ಯೂಯಾರ್ಕ್: ರಷ್ಯಾದೊಂದಿಗೆ ವ್ಯವಹಾರ ನಡೆಸುವ ಯಾವುದೇ ದೇಶವನ್ನು “ತುಂಬಾ ಕಠಿಣವಾಗಿ ಶಿಕ್ಷಿಸಲಾಗುವುದು” ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ರಿಪಬ್ಲಿಕನ್ ಪಕ್ಷ ಮಾಸ್ಕೋ ಗುರಿಯಾಗಿಸಿಕೊಂಡು ಕಠಿಣ ಕಾನೂನುಗಳನ್ನು ಜಾರಿಗೆ ತರುವ ಮೂಲಕ ರಷ್ಯಾವನ್ನು ಶಿಕ್ಷಿಸಲು ಮುಂದಾಗಿದೆ.ರಷ್ಯಾ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ಒತ್ತಡ ಹೇರುವ ಗುರಿ ಹೊಂದಿರುವ ಕ್ರಮಗಳನ್ನು ಜಾರಿಗೆ ತರುವ ಸಮಯ ಬಂದಿದೆಯೇ ಎಂದು ವರದಿಗಾರರು ಭಾನುವಾರ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಟ್ರಂಪ್, ರಿಪಬ್ಲಿಕನ್ ಸಂಸದರು ಹಾಗೆ ಮಾಡುತ್ತಿದ್ದಾರೆಂದು ನಾನು ಕೇಳಿದ್ದೇನೆ ಮತ್ತು ಅದು ನನಗೆ ಸರಿ ಎನಿಸಿದೆ. ಅವರು ಶಾಸನವನ್ನು ಅಂಗೀಕರಿಸುತ್ತಿದ್ದಾರೆ. ರಿಪಬ್ಲಿಕನ್ನರು ಶಾಸನವನ್ನು ಜಾರಿಗೆ ತರುತ್ತಿದ್ದಾರೆ. ರಷ್ಯಾದೊಂದಿಗೆ ವ್ಯವಹಾರ ನಡೆಸುವ ಯಾವುದೇ ದೇಶದ ಮೇಲೆ ಬಹಳ ಕಠಿಣವಾಗಿ ಶಿಕ್ಷಿಸಲಾಗುತ್ತದೆ. ಅವರು ಅದಕ್ಕೆ ಇರಾನ್ ಅನ್ನು ಕೂಡಾ ಸೇರಿಸಬಹುದು. ನಾನು ಸಹ ಅದನ್ನು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ರಷ್ಯಾದೊಂದಿಗೆ ವ್ಯವಹಾರ ಮಾಡುವ ಯಾವುದೇ ದೇಶವನ್ನು ತುಂಬಾ ಕಠಿಣ ಶಿಕ್ಷಿಸಲಾಗುವುದು. ನಾವು ಇರಾನ್ ಅನ್ನು ಈ ಸೂತ್ರಕ್ಕೆ ಸೇರಿಸಬಹುದು ಎಂದು ಟ್ರಂಪ್ ಇದೇ ವೇಳೆ ಪುನರುಚ್ಚರಿಸಿದರು. ಟ್ರಂಪ್ ಆಡಳಿತವು ಈಗಾಗಲೇ ಭಾರತದ ಮೇಲೆ ಶೇಕಡಾ 50 ರಷ್ಟು ಸುಂಕಗಳನ್ನು ವಿಧಿಸಿದ್ದಾರೆ. ಇದು ವಿಶ್ವದ ಅತಿ ಹೆಚ್ಚು ಸುಂಕಗಳಲ್ಲಿ ಒಂದಾಗಿದೆ. ರೆಸಿಪ್ರೋಕಲ್ ಟ್ಯಾರಿಫ್ ಅಲ್ಲದೇ ರಷ್ಯಾದ ಇಂಧನ ಖರೀದಿಗೆ ಹೆಚ್ಚುವರಿ ಶೇಕಡಾ 25 ರಷ್ಟು ಸುಂಕಗಳನ್ನು ವಿಧಿಸಲಾಗಿದೆ.
ಸೆನೆಟರ್ ಲಿಂಡ್ಸೆ ಗ್ರಹಾಂ ಮಂಡಿಸಿರುವ ಮಸೂದೆಯು ರಷ್ಯಾದ ತೈಲದ ದ್ವಿತೀಯ ಖರೀದಿ ಮತ್ತು ಮರುಮಾರಾಟದ ಮೇಲೆ ಶೇಕಡಾ 500 ರಷ್ಟು ಸುಂಕವನ್ನು ವಿಧಿಸುವ ಪ್ರಸ್ತಾಪ ಮಾಡಿದೆ. ಈ ಪ್ರಸ್ತಾವನೆಗೆ ಸೆನೆಟ್ ವಿದೇಶಾಂಗ ಸಂಬಂಧಗಳ ಸಮಿತಿಯಲ್ಲಿ ಬಹುತೇಕ ಸರ್ವಾನುಮತದ ಬೆಂಬಲವಿದೆ ಎಂದು ತಿಳಿದು ಬಂದಿದೆ.
ಗ್ರಹಾಂ ಮತ್ತು ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ಜಂಟಿಯಾಗಿ 2025 ರ ಸ್ಯಾಂಕ್ಷನಿಂಗ್ ರಷ್ಯಾ ಕಾಯ್ದೆಯನ್ನು ಪರಿಚಯಿಸಿದ್ದಾರೆ. ಇದು ಉಕ್ರೇನ್‌ನಲ್ಲಿ ಪುಟಿನ್ ಅವರ ಅನಾಗರಿಕ ಯುದ್ಧಕ್ಕೆ ಹಣಕಾಸು ಒದಗಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ ದ್ವಿತೀಯ ಸುಂಕಗಳು ಮತ್ತು ನಿರ್ಬಂಧಗಳನ್ನು ವಿಧಿಸಲು ಪ್ರಯತ್ನಿಸುತ್ತದೆ.
