ಉದಯವಾಹಿನಿ, ಚೀನಾ: ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿ ಇಂದು 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಭೂಕಂಪವು 10 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ತಿಳಿದು ಬಂದಿದೆ.ಚೀನಾದ ಭೌಗೋಳಿಕ ಸ್ಥಾನವು ಆಗಾಗ್ಗೆ ಭೂಕಂಪನ ಚಟುವಟಿಕೆಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ. ಎರಡು ದೊಡ್ಡ ಭೂಕಂಪನ ಬೆಲ್ಟ್ಗಳಾದ ಸರ್ಕಮ್-ಪೆಸಿಫಿಕ್ ಭೂಕಂಪನ ಬೆಲ್ಟ್ ಮತ್ತು ಸರ್ಕಮ್-ಇಂಡಿಯನ್ ಭೂಕಂಪನ ಬೆಲ್ಟ್ ನಡುವೆ ಚೀನಾ ದೇಶವಿದೆ. ಪೆಸಿಫಿಕ್ ಪ್ಲೇಟ್, ಭಾರತೀಯ ಪ್ಲೇಟ್ ಮತ್ತು ಫಿಲಿಪೈನ್ ಪ್ಲೇಟ್ಗಳ ನಡುವೆ ಚೀನಾ ಸಿಲುಕಿಕೊಂಡಿರುವುದರಿಂದ, ಈ ಪ್ರದೇಶದಲ್ಲಿ ಭೂಕಂಪನಗಳು ಹೆಚ್ಚು ಎಂದು ಭೂ ಶಾಸ್ತ್ರಜ್ಞರು ಹೇಳಿದ್ದಾರೆ.
ಇಪ್ಪತ್ತನೇ ಶತಮಾನದ ಆರಂಭದಿಂದಲೂ, ಚೀನಾದಲ್ಲಿ ರಿಕ್ಟರ್ ಮಾಪಕದಲ್ಲಿ 6 ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ 800ಕ್ಕೂ ಹೆಚ್ಚು ಭೂಕಂಪಗಳು ಸಂಭವಿಸಿವೆ. ಗುಯಿಝೌ, ಝೆಜಿಯಾಂಗ್ ಮತ್ತು ಹಾಂಕಾಂಗ್ ಹೊರತುಪಡಿಸಿ, ಭೂಕಂಪಗಳು ಬಹುತೇಕ ಎಲ್ಲಾ ಪ್ರಾಂತ್ಯಗಳು ಮತ್ತು ಸ್ವಾಯತ್ತ ಪ್ರದೇಶಗಳಲ್ಲಿ ಸಂಭವಿಸಿವೆ.
ಇನ್ನು ಚೀನಾದ ಭೂ ವಿಜ್ಞಾನಿಗಳ ಪ್ರಕಾರ, 1900 ರಿಂದ ಇತ್ತೀಚೆಗೆ ಚೀನಾದಲ್ಲಿ 5,50,000ಕ್ಕೂ ಹೆಚ್ಚು ಜನರು ಭೂಕಂಪಗಳಲ್ಲಿ ಸಾವನ್ನಪ್ಪಿದ್ದಾರೆ. ಇದು ಒಟ್ಟು ಜಾಗತಿಕ ಭೂಕಂಪ ಸಾವು – ನೋವುಗಳಲ್ಲಿ ಶೇಕಡಾ 53 ರಷ್ಟಿದೆ. 1949 ರಿಂದ ಚೀನಾದ ಪ್ರಾಂತ್ಯಗಳು, ಸ್ವಾಯತ್ತ ಪ್ರದೇಶಗಳಲ್ಲಿ 100ಕ್ಕೂ ಹೆಚ್ಚು ವಿನಾಶಕಾರಿ ಭೂಕಂಪಗಳು ಸಂಭವಿಸಿವೆ. ಈ ಭೂಕಂಪಗಳು 2,70,000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿವೆ. ಇದು ಚೀನಾದಲ್ಲಿ ನೈಸರ್ಗಿಕ ವಿಕೋಪಗಳಿಂದ ಉಂಟಾದ ಒಟ್ಟು ಸಾವಿನ ಸಂಖ್ಯೆಯ ಶೇಕಡಾ 54 ರಷ್ಟಿದೆ.
ಭೂಕಂಪನದಲ್ಲೂ 2 ವಿಧ: ಭೂಕಂಪನದಲ್ಲಿ ಪ್ರಮುಖವಾಗಿ 2 ವಿಧಗಳಿವೆ. ಒಂದು ಆಳವಾದ ಭೂಕಂಪನ, ಇನ್ನೊಂದು ಆಳವಿಲ್ಲದ ಭೂಕಂಪನ. ಆಳವಿಲ್ಲದ ಭೂಕಂಪಗಳು ಸಾಮಾನ್ಯವಾಗಿ ಆಳವಾದ ಭೂಕಂಪಗಳಿಗಿಂತ ಹೆಚ್ಚು ಅಪಾಯಕಾರಿ. ಏಕೆಂದರೆ ಆಳವಿಲ್ಲದ ಭೂಕಂಪಗಳಿಂದ ಬರುವ ಭೂಕಂಪನ ಅಲೆಗಳು ಮೇಲ್ಮೈಗೆ ಪ್ರಯಾಣಿಸಲು ಕಡಿಮೆ ದೂರವನ್ನು ಹೊಂದಿರುತ್ತವೆ.
