ಉದಯವಾಹಿನಿ, ತಿರುವನಂತಪುರಂ : ಕೇರಳದ ಪ್ರಸಿದ್ಧ ದೇವಾಲಯ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಮಂಡಲ ಮಕರವಿಳಕ್ಕು ಯಾತ್ರೆ ಆರಂಭವಾಗಿದ್ದು, ದೇಶಾದ್ಯಂತದ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಇದರಿಂದ ದೇವಾಲಯ ಪರಿಸರದಲ್ಲಿ ಭಾರಿ ಜನ ಸಂದಣಿ ಕಂಡು ಬರುತ್ತಿದ್ದು, ನೂಕು ನುಗ್ಗಲು ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಜನಸಂದಣಿ ನಿಯಂತ್ರಿಸಲು ಟ್ರಾವಂಕೂರ್ ದೇವಸ್ವಂ ಬೋರ್ಡ್ ಮುಂದಾಗಿದ್ದು, ನವೆಂಬರ್ 20ರಿಂದ ಪ್ರತಿದಿನ 5,000 ಮಂದಿಗೆ ಮಾತ್ರ ಸ್ಪಾಟ್ ಬುಕ್ಕಿಂಗ್‌ಗೆ (ಸ್ಥಳದಲ್ಲೇ ಬುಕ್ಕಿಂಗ್) ಅವಕಾಶ ನೀಡಲಾಗುತ್ತಿದೆ ಎಂದು ಘೋಷಿಸಿದೆ. ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ಸ್ಪಾಟ್ ಬುಕ್ಕಿಂಗ್ ಅನ್ನು ಸೀಮಿತಗೊಳಿಸಲಾಗಿದೆ ಎಂದು ಟಿಡಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆ ನಿಳಕ್ಕಲ್ ಮತ್ತು ವಂಡಿಪೆರಿಯಾರ್ ಕೇಂದ್ರದಲ್ಲಿ ಮಾತ್ರ ಇರಲಿದೆ. ಪಂಪ, ಎರುಮೆಲಿ ಮತ್ತು ಚೆಂಗನೂರ್‌ನಲ್ಲಿ ತಾತ್ಕಾಲಿಕವಾಗಿ ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಈ ನಿರ್ಬಂಧ ನವೆಂಬರ್ 24ರವರೆಗೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.
