ಉದಯವಾಹಿನಿ, ಮೀರತ್: ಮದುವೆ ಸಮಾರಂಭವು ಬಹಳ ಅದ್ಧೂರಿಯಾಗಿರಬೇಕು ಎಂಬ ಕಾರಣಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಮದುವೆ ಮನೆಗೆ ಅದ್ಧೂರಿಯಾಗಿ ಎಂಟ್ರಿ, ವಧು ವರನನ್ನು ವಿಶೇಷ ರೀತಿ ಸ್ವಾಗತ ಮಾಡುವುದು ಹೀಗೆ ಗ್ರ್ಯಾಂಡ್ ಆಗಿ ಮಾಡಲಾಗುತ್ತದೆ. ಇನ್ನು ಮದುವೆ ಸಮಾರಂಭ ವಿಶೇಷವಾಗಿಸುವ ಸಲುವಾಗಿ ಪಟಾಕಿ ಸಿಡಿಸುವುದು ಸಾಮಾನ್ಯ ಆದರೆ ಇಲ್ಲೊಂದು ಜೋಡಿ ಮದುವೆ ದಿನ ರೈಫಲ್ ನಲ್ಲಿ ಗುಂಡು ಹಾರಿಸಿದ್ದ ಘಟನೆ ಮೀರತ್‌ನಲ್ಲಿ ನಡೆದಿದೆ. ನವ ದಂಪತಿ ರೈಫಲ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಹಾರ ಬದಲಾಯಿಸಿಕೊಂಡಿದ್ದು ಅದರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಆನ್ಲೈನ್‌ನಲ್ಲಿ ಸಂಚಲನ ಉಂಟು ಮಾಡುತ್ತಿದ್ದಂತೆ ಬಳಿಕ ವಿಷಯ ತಿಳಿದ ಮೀರತ್‌ನ ಅಧಿಕಾರಿಗಳು ಇದನ್ನು ಗಮನಿಸಿ ಪ್ರಕರಣ ದಾಖಲಿಸಿದ್ದಾರೆ.ಹರಿಯಾಣ ಕಿಕ್ ಬಾಕ್ಸರ್-ವರ ಸಾಹಿಲ್ ಭಾರದ್ವಾಜ್ ಅಂತಾರಾಷ್ಟ್ರೀಯ ಜಾವೆಲಿನ್ ಎಸೆತಗಾರ್ತಿ ಅಣ್ಣು ರಾಣಿ ಅವರ ಮದುವೆ ಕಾರ್ಯಕ್ರಮವನ್ನು ಮಿರತ್ ನಲ್ಲಿ ಆಯೋಜಿಸಲಾಗಿತ್ತು. ನವೆಂಬರ್ 18ರ ರಾತ್ರಿ ಮೀರತ್‌ನ ಅರಮನೆಯೊಂದರಲ್ಲಿ ಈ ವಿವಾಹ ನಡೆದಿದೆ. ಮದುವೆ ಸಮಾರಂಭಕ್ಕೆ ನವ ವಿವಾಹಿತರು ವೇದಿಕೆಯ ಮೇಲೆ ನಿಂತು ಜೊತೆಯಾಗಿ ಸೇರಿ ರೈಫಲ್ ಹಿಡಿದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವಿಡಿಯೋವನ್ನು ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಮನೋರಂಜನೆಯ ಉದ್ದೇಶಕ್ಕಾಗಿ ಮಾಡಿದ್ದರೂ ಇದೀಗ ದಂಪತಿಗಳಿಬ್ಬರು ಪ್ರಕರಣ ಒಂದರಲ್ಲಿ ಸಿಲುಕುವಂತೆ ಮಾಡಿದೆ.
