ಉದಯವಾಹಿನಿ,ಹೊಸದಿಲ್ಲಿ: ಉತ್ತರ ಭಾರತದಾದ್ಯಂತ ಮಾನ್ಸೂನ್ ಬಿರುಸಿನ ನಡುವೆ ದಿಲ್ಲಿಯಲ್ಲಿ ಯಮುನಾ ನದಿಯ ನೀರಿನ ಮಟ್ಟವು ಈಗ ಸಾರ್ವಕಾಲಿಕ ಎತ್ತರದಲ್ಲಿದೆ. ನೀರಿನ ಮಟ್ಟ ಹೆಚ್ಚಾದ ಪರಿಣಾಮ ಹಲವಾರು ನದಿ ತೀರದ ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ. 45 ವರ್ಷಗಳ ಹಿಂದೆ 207.49 ದಾಖಲೆಯ ಮಟ್ಟ ದಾಟಿದ ನದಿ ಈಗ 207.55 ಮೀಟರ್ ಗಳಷ್ಟು ಎತ್ತರದಲ್ಲಿ ಹರಿಯುತ್ತಿದೆ. ಉಕ್ಕಿ ಹರಿದ ನದಿಯಿಂದಾಗಿ ಮನೆಗಳು ಮತ್ತು ಮಾರುಕಟ್ಟೆಗಳು ಜಲಾವೃತಗೊಂಡಿದ್ದು, ನಿವಾಸಿಗಳಿಗೆ ಅಪಾರ ತೊಂದರೆಯಾಗಿದೆ. ಸಮೀಪದ ಅನೇಕ ನಿವಾಸಿಗಳು ಈಗ ತಮ್ಮ ಸಾಮಾನುಗಳೊಂದಿಗೆ ಟೆರೇಸ್ ಗೆ ತೆರಳಿದ್ದಾರೆ, ನೀರಿನ ಮಟ್ಟ ಏರುತ್ತಿರುವುದನ್ನು ಅಸಹಾಯಕತೆಯಿಂದ ನೋಡುತ್ತಿದ್ದಾರೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈಗ ತುರ್ತು ಸಭೆ ಕರೆದಿದ್ದಾರೆ. ಮಾನ್ಸೂನ್ ಬಿರುಸಿನಿಂದ ಉಂಟಾಗುವ ಪ್ರತಿಯೊಂದು ಪರಿಸ್ಥಿತಿಯನ್ನು ನಿಭಾಯಿಸಲು ದಿಲ್ಲಿ ಸರಕಾರ ಸಿದ್ಧವಾಗಿದೆ ಎಂದು ಅವರು ಈ ಹಿಂದೆ ಹೇಳಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕ ಸಭೆಗೆ ದಿಲ್ಲಿ ಪೊಲೀಸರು ನಿರ್ಬಂಧ ಹೇರಿದ್ದಾರೆ. ಬೆಳಗ್ಗೆ 11 ಗಂಟೆಗೆ ಹಳೆ ರೈಲ್ವೆ ಸೇತುವೆಯಲ್ಲಿ 207.38 ಮಟ್ಟಕ್ಕೆ ನದಿ ಹರಿಯುತ್ತಿತ್ತು. ಇದು 2013 ರ ನೀರಿನ ಮಟ್ಟ 207.32 ಕ್ಕಿಂತ ಹೆಚ್ಚಾಗಿದೆ, ರಾಷ್ಟ್ರೀಯ ರಾಜಧಾನಿಯಲ್ಲಿ 1978ರಲ್ಲಿ ಯಮುನಾ ನದಿ 207.49 ಮೀಟರ್ ಗಳಷ್ಟು ಹರಿದಿದ್ದು, ಈ ದಾಖಲೆ ಇಂದು ಮುರಿದು ಹೋಗಿದೆ. ಕೇಂದ್ರ ಜಲ ಆಯೋಗದ ಅಧಿಕಾರಿಗಳು ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ, ಸ್ಥಿರವಾದ ಏರಿಕೆಯು ಹಳೆಯ ದಿಲ್ಲಿಯಲ್ಲಿ ತೀವ್ರ ಪ್ರವಾಹದ ಎಚ್ಚರಿಕೆಯನ್ನು ನೀಡುತ್ತಿದೆ.

Leave a Reply

Your email address will not be published. Required fields are marked *

error: Content is protected !!