ಉದಯವಾಹಿನಿ, ಕೋಲ್ಕತ್ತಾ: ಕಲ್ಲಿದ್ದಲು ಮಾಫಿಯಾ ವಿರುದ್ಧ ಹಣ ವರ್ಗಾವಣೆ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ 42 ಸ್ಥಳಗಳ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ ನಡೆದ ದಾಳಿಯಲ್ಲಿ ಫೆಡರಲ್ ತನಿಖಾ ಸಂಸ್ಥೆಯ ಸುಮಾರು 100 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ದೊಡ್ಡ ಪ್ರಮಾಣದ ಕಲ್ಲಿದ್ದಲು ಮಾಫಿಯಾ ನಡೆದಿದ್ದು, ಇದರಿಂದ ಸರ್ಕಾರಕ್ಕೆ ನೂರಾರು ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಜಾರ್ಖಂಡ್‌ನಲ್ಲಿ ಇಡಿ 18 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ದುರ್ಗಾಪುರ, ಪುರುಲಿಯಾ, ಹೌರಾ ಮತ್ತು ಕೋಲ್ಕತ್ತಾದಾದ್ಯಂತ 24 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ದಾಳಿ ವೇಳೆ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಕೆಲವು ಡಿಜಿಟಲ್ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅನಿಲ್ ಗೋಯಲ್, ಸಂಜಯ್ ಉದ್ಯೋಗ್, ಎಲ್‌ಬಿ ಸಿಂಗ್ ಮತ್ತು ಅಮರ್ ಮಂಡಲ್‌ಗೆ ಸಂಬಂಧಿಸಿದ ಪ್ರಕರಣಗಳೂ ಸೇರಿದ್ದು, ನರೇಂದ್ರ ಖಾರ್ಕಾ, ಅನಿಲ್ ಗೋಯಲ್, ಯುಧಿಷ್ಠೀರ್ ಘೋಷ್, ಕೃಷ್ಣ ಮುರಾರಿ ಕಾಯಲ್ ಮತ್ತು ಇತರರಿಗೆ ಸಂಬಂಧಿಸಿದ ಕಚೇರಿಗಳಲ್ಲೂ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

Leave a Reply

Your email address will not be published. Required fields are marked *

error: Content is protected !!