ಉದಯವಾಹಿನಿ, ಚೆನ್ನೈ: ಕಳೆದ ವರ್ಷ ʻಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆʼ ಎನ್ನುವ ಮೂಲಕ ಭಾರೀ ವಿವಾದ ಸೃಷ್ಟಿಸಿದ್ದ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಇದೀಗ ತಮ್ಮ ಹೇಳಿಕೆಯಿಂದಲೇ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಸಂಸ್ಕೃತ ʻಸತ್ತ ಭಾಷೆʼ ಅಂತ ಕರೆದಿದ್ದಾರೆ.ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಸಂಸ್ಕೃತಕ್ಕೆ 2,400 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಆದ್ರೆ ತಮಿಳಿಗೆ 150 ಕೋಟಿ ರೂ. ಮಾತ್ರ ಮೀಸಲಿಟ್ಟಿದೆ. ಸಂಸ್ಕೃತವನ್ನ ಉತ್ತೇಜಿಸುತ್ತಾ ತಮಿಳು ಭಾಷೆಯನ್ನ ಕೇಂದ್ರವು ಕಡೆಗಣಿಸಿದೆ ಎಂದು ಹೇಳಿದ್ದಾರೆ. ಅಲ್ಲದೇ ಮಕ್ಕಳು ತಮಿಳು ಕಲಿಯಲು ಉತ್ಸುಕವಾಗಿದ್ದರೆ, ಹಿಂದಿ ಮತ್ತು ಸಂಸ್ಕೃತವನ್ನ ಕಲಿಯುವಂತೆ ಏಕೆ ಒತ್ತಡ ಹೇರುತ್ತಿದ್ದೀರಿ ಎಂದು ಪ್ರಧಾನಿ ಮೋದಿ ಅವರನ್ನ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಉದಯನಿಧಿ ಸ್ಟಾಲಿನ್ ಹೇಳಿಕೆ ಬಳಿಕ ರಾಜಕೀಯ ವಲಯದಲ್ಲೂ ಬಿರುಗಾಳಿ ಎದ್ದಿದೆ. ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
