ಉದಯವಾಹಿನಿ,ಶಿಡ್ಲಘಟ್ಟ: ಎಚ್.ಎನ್.ವ್ಯಾಲಿ ಯೋಜನೆ ಮೂಲಕ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳಿಗೆ ನೀರುಣಿಸುವ ಯೋಜನೆಯ ದುರದೃಷ್ಟಕರ. ಇನ್ನು ಹದಿನೈದು ದಿನಗಳ ಕಾಲ ಕಾಯುತ್ತೇವೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಚೇರಿಯ ಮುಂದೆ ದೊಡ್ಡ ಮಟ್ಟದ ಹೋರಾಟ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು. ನಗರದ ರೈತಸಂಘದ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಎಚ್.ಎನ್.ವ್ಯಾಲಿ ಯೋಜನೆಯ ನೀರಿನ ಲಭ್ಯತೆಯಿರುವುದು 210 ಎಂ.ಎಲ್.ಡಿ ನೀರು. ರೈತ ಸಂಘದ ಸತತ ಪ್ರಯತ್ನದಿಂದಲೂ ಕೂಡ ಅಧಿಕಾರಿಗಳ ಲೋಪದಿಂದ ಇದುವರೆಗೂ ನಮ್ಮ ಜಿಲ್ಲೆಗೆ ಈ ನೀರು ಹರಿಸಲು ಸಾಧ್ಯವಾಗಿಲ್ಲ. ಈ ವರ್ಷದ ಜನವರಿಯಿಂದಲೂ ನಮ್ಮ ಜಿಲ್ಲೆಗೆ ನೀರು ಹರಿಸುವ ಕಾರ್ಯವಾಗಿಲ್ಲ ಎಂದು ಹೇಳಿದರು.

ಶಿಡ್ಲಘಟ್ಟ ತಾಲ್ಲೂಕಿನ ಕೆರೆಗಳಿಗೆ ಎಚ್.ಎನ್.ವ್ಯಾಲಿ ಯೋಜನೆ ನೀರು ಈ ವರ್ಷ ಬರಲೇ ಇಲ್ಲ. ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ಈ ಸಂಗತಿಯನ್ನು ತರಲಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕೇವಲ ದಿನದೂಡುತ್ತಿದ್ದಾರೆ ಎಂದು ಆರೋಪಿಸಿದರು. ಚಿಕ್ಕಬಳ್ಳಾಪುರ ತಾಲ್ಲೂಕಿನಿಂದ ಶಿಡ್ಲಘಟ್ಟ ತಾಲ್ಲೂಕಿಗೆ ನೀರು ಬರುವ ಕಾಲುವೆಗಳಲ್ಲಿ ಆ ಭಾಗದ ರೈತರು ಪಂಪ್ ಸೆಟ್ ಮೂಲಕ ನೀರನ್ನು ತಮ್ಮ ಜಮೀನುಗಳಿಗೆ ಹರಿಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯದಿರುವುದು ಅಧಿಕಾರಿಗಳ ಅತಿ ದೊಡ್ಡ ಲೋಪವಾಗಿದೆ ಎಂದರು. ಮುಳಬಾಗಿಲಿನ ಶಾಸಕರು ಎಚ್.ಎನ್.ವ್ಯಾಲಿ ಹಾಗೂ ಕೆ.ಸಿ.ವ್ಯಾಲಿ ನೀರು ಅವೈಜ್ಞಾನಿಕವಾಗಿ ಹರಿಸಿದ್ದರಿಂದ ಟೊಮೇಟೊ ಬೆಳೆಗೆ ನುಸಿ ರೋಗ ತಗುಲಿದೆ ಎಂದು ಆರೋಪಿಸಿದ್ದಾರೆ. ಈ ಮಾತು ಸತ್ಯಕ್ಕೆ ದೂರವಾದುದು. ಏಕೆಂದರೆ ಎಚ್.ಎನ್.ವ್ಯಾಲಿ ಹಾಗೂ ಕೆ.ಸಿ.ವ್ಯಾಲಿ ನೀರು ಹರಿಯದೇ ಇರುವ ಗುಡಿಬಂಡೆ, ಬಾಗೇಪಲ್ಲಿ, ಚೇಳೂರು, ಚಿಂತಾಮಣಿಯ ಮೂರು ಹೋಬಳಿಗಳಲ್ಲೂ ಟೊಮೇಟೊ ಬೆಳೆಗೆ ನುಸಿ ರೋಗ ತಗುಲಿದೆ. ಬಯಲು ಸೀಮೆಗೆ ನೀರನ್ನು ಹರಿಸುವ ನಮ್ಮ ಹೋರಾಟಕ್ಕೆ ದಯಮಾಡಿ ಕೈಜೋಡಿಸಿ, ಸುಮ್ಮನೇ ಆರೋಪಗಳನ್ನು ಮಾಡುವುದು ತರವಲ್ಲ ಎಂದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮುನಿನಂಜಪ್ಪ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಬಸವರಾಜು, ರಮೇಶ್, ಕೃಷ್ಣಪ್ಪ, ಬೀರಪ್ಪ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!