ಉದಯವಾಹಿನಿ, ನವದೆಹಲಿ: ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಡಿಜಿಲ್ ಪೇಮೆಂಟ್ ಮತ್ತು ಆನ್‌ಲೈನ್ ಬ್ಯಾಂಕಿಂಗ್ ವೇಗವಾಗಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲೇ ಆನ್‌ಲೈನ್ ಸ್ಕ್ಯಾಮರ್ ಗಳು ಹೊಸ ಹೊಸ ಕುತಂತ್ರಗಳ ಮೂಲಕ ನಿಮ್ಮ ಖಾತೆಯಲ್ಲಿರುವ ಹಣವನ್ನು ಗುಳುಂ ಮಾಡಲು ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಇದರಲ್ಲಿ ಒಂದು ವಿಧಾನವೆಂದರೆ ಜನರನ್ನು ಲಿಂಕ್ ಕ್ಲಿಕ್ ಮಾಡಿಸುವ ಮೂಲಕ ಅವರ ಖಾತೆಗೆ ಆಕ್ಸೆಸ್ ಪಡ್ಕೊಂಡು ಆ ಮೂಲಕ ಅವರ ಖಾತೆಯಲ್ಲಿರುವ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುವ ಮೋಸದ ದಂಧೆ ಸರ್ವ ವ್ಯಾಪಿಯಾಗಿದೆ. ಜನರು ತಮ್ಮ ಮೊಬೈಲ್‌ಗೆ ಬರುವ ಮೆಸೇಜ್ ಲಿಂಕ್‌ಗಳಲ್ಲಿ ಸಾಚಾ ಯಾವುದು? ಮೋಸದ ಲಿಂಕ್ ಯಾವುದು? ಎಂಬುದನ್ನು ಗುರುತಿಸಲು ವಿಫಲರಾಗಿ ಆನ್‌ಲೈನ್ ವಂಚಕರ ಮೊಸದ ಬಲೆಗೆ ಸುಲಭ ತುತ್ತಾಗಿ ತಾವು ಕಷ್ಟಪಟ್ಟು ಗಳಿಸಿ ತಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಕೂಡಿಟ್ಟ ಹಣವನ್ನು ಕ್ಷಣಾರ್ಧದಲ್ಲಿ ಕಳೆದುಕೊಳ್ಳುತ್ತಿದ್ದಾರೆ.
ಇದೀಗ ಕಳೆದ ಕೆಲವು ದಿನಗಳಿಂದ ಬ್ಯಾಂಕಿಂಗ್ ವೆಬ್‌ಸೈಟ್‌ಗಳ ಬಗ್ಗೆ ಮಾಹಿತಿ ನೀಡುವ ವಿಡಿಯೊ ಒಂದು ಡಿಜಿಟಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈ ವಿಡಿಯೊದಲ್ಲಿ ಬ್ಯಾಂಕ್ ಗ್ರಾಹಕರು ನೈಜ ಬ್ಯಾಂಕಿಂಗ್ ವೆಬ್‌ಸೈಟ್‌ಗಳನ್ನು ಗುರುತಿಸುವುದು ಹೇಗೆ ಮತ್ತು ಆ ಮೂಲಕ ವಂಚಕರ ಟ್ರ್ಯಾಪ್ ಗೆ ಬಲಿಯಾಗದಿರುವುದು ಹೇಗೆ ಎಂಬ ಕುರಿತಾಗಿ ಮಾಹಿತಿಯನ್ನು ನೀಡಲಾಗಿದೆ. ಮತ್ತು ಆನ್‌ಲೈನ್ ಬ್ಯಾಂಕಿಂಗ್ ಭದ್ರತೆ ವಿಚಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡಿರುವ ಸುರಕ್ಷತಾ ಉಪಕ್ರಮಗಳ ಬಗ್ಗೆಯೂ ಈ ವಿಡಿಯೊದಲ್ಲಿ ವಿವರವಾದ ಮಾಹಿತಿಯನ್ನು ನೀಡಲಾಗಿದೆ.
