
ಉದಯವಾಹಿನಿ, ಲಖನೌ : ವೈದ್ಯರು ಎಂದರೆ ರೋಗಿಗಳ ಪ್ರಾಣ ಉಳಿಸುವವರು. ಯಾವುದೇ ಪರಿಸ್ಥಿತಿ ಇರಲಿ ತಕ್ಷಣ ಧಾವಿಸಿ ನೆರವಾಗುತ್ತಾರೆ ಎನ್ನುವ ನಂಬಿಕೆ ಎಲ್ಲರಲ್ಲಿದೆ. ಇದು ನಿಜ ಕೂಡ. ಆದರೆ ಇಲ್ಲೊಬ್ಬ ವೈದ್ಯ ಇದನ್ನೆಲ್ಲ ಮರೆತು ಆಸ್ಪತ್ರೆಯ ವಾರ್ಡ್‌ನಲ್ಲಿ ತನ್ನ ಭಾವಿ ಪತ್ನಿಯೊಂದಿಗೆ ಡ್ಯಾನ್ಸ್ ಮಾಡಿದ್ದಾನೆ. ಉತ್ತರ ಪ್ರದೇಶದ ಶಾಮ್ಲಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಸದ್ಯ ವೈದ್ಯನನ್ನು ವಜಾಗೊಳಿಸಿ ತನಿಖೆಗೆ ಆದೇಶ ಹೊರಡಿಸಲಾಗಿದೆ. ವೈದ್ಯನನ್ನು ಡಾ. ವಕಾರ್ ಸಿದ್ದಿಕಿ ಎಂದು ಗುರುತಿಸಲಾಗಿದೆ.
ಭಾವಿ ಪತ್ನಿಯೊಂದಿಗಿನ ಡಾ. ವಕಾರ್ ಸಿದ್ದಿಕಿಯ ಡ್ಯಾನ್ಸ್ ಎಲ್ಲೆಡೆ ಹರಿದಾಡುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಈಗಾಗಲೇ ಆತನಿಗೆ ನೀಡಿರುವ ವಸತಿ ಸೌಕರ್ಯವನ್ನು ಹಿಂಪಡೆದಿದ್ದು, ಅಧಿಕಾರಿಗಳಿಗೆ ವರದಿ ನೀಡಿಲಾಗಿದೆ. ಡಾ. ವಕಾರ್ ಸಿದ್ದಿಕಿ ಇತ್ತೀಚೆಗೆ 2 ವರ್ಷಗಳ ಒಪ್ಪಂದದ ಮೇಲೆ ನೇಮಕಗೊಂಡಿದ್ದ. ಆಸ್ಪತ್ರೆಯ ತುರ್ತು ವಾರ್ಡ್‌ನಲ್ಲಿ ನಿಯೋಜನೆಗೊಂಡಿದ್ದ ಆತ ಆಸ್ಪತ್ರೆಯ ಮೇಲಿನ ಮಹಡಿಯ ಕೊಠಡಿಯಲ್ಲಿ ಭಾವಿ ಪತ್ನಿಯೊಂದಿಗೆ ಡ್ಯಾನ್ಸ್ ಮಾಡಿದ್ದಾನೆ. ಈ ವಿಡಿಯೊ ಹೊರಬಿದ್ದ ಬೆನ್ನಲ್ಲೇ ನೆಟ್ಟಿಗರ ಗಮನ ಸೆಳೆಯಿತು.
