ಉದಯವಾಹಿನಿ, ಚೆನ್ನೈ: ದುಬೈ ಏರ್‌ ಶೋ ವೇಳೆ ತೇಜಸ್ ವಿಮಾನ ಪತನ ದುರಂತದಲ್ಲಿ ಪ್ರಾಣ ಕಳೆದುಕೊಂಡ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅವರ ಪಾರ್ಥಿವ ಶರೀರವನ್ನ ಭಾನುವಾರ ಬೆಳಗ್ಗೆ ಕೊಯಮತ್ತೂರಿನ ಸುಲೂರು ವಾಯುನೆಲೆಗೆ ತಂದು ಅಂತಿಮ ನಮನ ಸಲ್ಲಿಸಲಾಯಿತು. ಭಾರತೀಯ ವಾಯುಪಡೆ (IAF)ನ ಅಧಿಕಾರಿಯ ಮೃತದೇಹವನ್ನು ವಿಶೇಷ ವಿಮಾನದಲ್ಲಿ ಇಂದು ಭಾರತಕ್ಕೆ ತರಲಾಯಿತು. ಇದಕ್ಕೂ ಮುನ್ನ ಎಮಿರಾಟಿ ರಕ್ಷಣಾ ಪಡೆಗಳು ವಿದ್ಯುಕ್ತ ಗೌರವ ಸಲ್ಲಿಸಿ, ನಮಾಂಶ್‌ ಶೌರ್ಯ, ಸಾಹಸವನ್ನು ಶ್ಲಾಘಿಸಿದವು. ಅಲ್ಲದೇ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಮತ್ತು ಕಾನ್ಸುಲೇಟ್ ಜನರಲ್ ಸತೀಶ್ ಶಿವನ್ ಕೂಡ ಅಂತಿಮ ಗೌರವ ಸಲ್ಲಿಸಿದ್ದರು. ಈ ಕುರಿತು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಕೂಡ ಹಂಚಿಕೊಂಡಿದೆ.

ಸದ್ಯ ಸಯಾಲ್‌ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿವೆ. ಗ್ರಾಮಸ್ಥರು ಸಯಾಲ್‌ ಸಾವಿಗೆ ಸಂತಾಪ ಸೂಚಿಸಿದ್ದು, ಪಾರ್ಥೀವ ಶರೀರ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಈ ನಡುವೆ ಭಾರತೀಯ ವಾಯುಪಡೆ ಅಧಿಕಾರಿಯೂ ಆಗಿರುವ ಸಯಾಲ್‌ ಅವರ ಪತ್ನಿ, 6 ವರ್ಷದ ಮಗಳು ಹಾಗೂ ಪೋಷಕರು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನಾಗ್ರೋಟಾ ಬಾಗ್ವಾನ್‌ನಿಂದ ಸುಲೂರು ವಾಯುನೆಲೆಗೆ ಆಗಮಿಸಿದ್ದಾರೆ.ʻಈ ಅಪಘಾತದ ಬಗ್ಗೆ ತಿಳಿದು ನಮ್ಮೆಲ್ಲರಿಗೂ ತುಂಬಾ ದುಃಖವಾಗಿದೆ. ಸಯಾಲ್‌ ಊರಿನಲ್ಲಿ ಇಲ್ಲದಿರಬಹುದು, ಆದ್ರೆ ಅವರ ಕುಟುಂಬ ಇಲ್ಲಿದೆ. ಅವರು ನಮ್ಮ ಹೆಮ್ಮೆ, ಹಾಗಾಗಿ ಅಂತಿಮ ನಮನ ಸಲ್ಲಿಸಲು, ಅವರ ಮನೆಗೆ ಆಗಮಿಸಿದ್ದೇವೆʼ ಅಂತ ಗ್ರಾಮಸ್ಥರಾದ ಮೆಹರ್ ಚಂದ್ ಅನ್ನೋರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!