
ಉದಯವಾಹಿನಿ, ಶಾಂಘೈ : ಅರುಣಾಚಲ ಪ್ರದೇಶದಲ್ಲಿ ಜನಿಸಿರುವ ಭಾರತೀಯ ಮೂಲದ ಯುನೈಟೆಡ್ ಕಿಂಗ್‌ಡಮ್(ಯು.ಕೆ) ನಿವಾಸಿಯಾದ ಮಹಿಳೆಯೊಬ್ಬರು ಚೀನಾದ ಶಾಂಘೈನ ಪುಡಾಂಗ್ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳಿಂದ ಕಿರುಕುಳ ಅನುಭವಿಸಿದ್ದಾರೆ. ತಮ್ಮನ್ನು ವಶಕ್ಕೆ ಪಡೆದ ಅಧಿಕಾರಿಗಳು ಭಾರತೀಯ ಪಾಸ್‌ಪೋರ್ಟ್ ಸ್ವೀಕರಿಸಲು ನಿರಾಕರಿಸಿ, 18 ಗಂಟೆಗಳ ಕಾಲ ತಡೆಹಿಡಿದು ಕಿರುಕುಳ ನೀಡಿದರು ಎಂದು ಅವರು ತಿಳಿಸಿದ್ದಾರೆ.
ಏನಾಯ್ತು?: ನವೆಂಬರ್ 21ರಂದು ಪ್ರೇಮಾ ವಾಂಗ್‌ಜೋಮ್ ಥೋಂಗ್‌ಡಾಕ್ ಎಂಬವರು ಲಂಡನ್‌ನಿಂದ ಜಪಾನ್‌ಗೆ ಪ್ರಯಾಣಿಸುತ್ತಿದ್ದರು. ಇದಕ್ಕಾಗಿ ಪುಡಾಂಗ್ ವಿಮಾನ ನಿಲ್ದಾಣದಲ್ಲಿ 3 ಗಂಟೆಗಳ ನಿಗದಿತ ಲೇಓವರ್ (ಮುಂದಿನ ಪ್ರಯಾಣಕ್ಕಾಗಿ ಕಾಯುವ ಅವಧಿ) ಇತ್ತು. ಈ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳು ಪಾಸ್‌ಪೋರ್ಟ್ ಪರಿಶೀಲಿಸಿ ಅದನ್ನು ‘ಅಮಾನ್ಯ’ ಎಂದು ಘೋಷಿಸಿದರು. ನಂತರ 18 ಗಂಟೆಗಳವರೆಗೆ ಕಿರುಕುಳ ನೀಡಿದರು ಎಂದು ಪ್ರೇಮಾ ಹೇಳಿದ್ದಾರೆ.
ಅರುಣಾಚಲ ಪ್ರದೇಶ ಚೀನಾದ ಭಾಗ ಎಂದ ಅಧಿಕಾರಿಗಳು: ಪ್ರೇಮಾ ಅವರ ಪಾಸ್‌ಪೋರ್ಟ್‌ನಲ್ಲಿ ಜನ್ಮಸ್ಥಳ ಅರುಣಾಚಲ ಪ್ರದೇಶ ಎಂದಿರುವುದೇ ಇದಕ್ಕೆಲ್ಲ ಕಾರಣವಾಗಿದೆ. ವಿಮಾನ ನಿಲ್ದಾಣದ ವಲಸೆ ಸಿಬ್ಬಂದಿ “ಅರುಣಾಚಲ ಪ್ರದೇಶ ಚೀನಾದ ಭಾಗ” ಎಂದು ಹೇಳಿದ್ದಾಗಿ ಅವರು ತಿಳಿಸಿದ್ದಾರೆ.
ಚೀನಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ- ವಲಸೆ ಅಧಿಕಾರಿಗಳಿಂದ ಅಪಹಾಸ್ಯ: ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಚೀನಾ ಈಸ್ಟರ್ನ್ ಏರ್‌ಲೈನ್ಸ್ ಸಿಬ್ಬಂದಿ ತಮ್ಮನ್ನು ಅಪಹಾಸ್ಯ ಮಾಡಿದರು. ಚೀನಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಂತೆಯೂ ಸೂಚಿಸಿದರು. ಸ್ಪಷ್ಟ ಮಾಹಿತಿ, ಆಹಾರ ಮತ್ತು ಮೂಲಭೂತ ಸೌಲಭ್ಯಗಳನ್ನೂ ನಿರಾಕರಿಸಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಏರ್ಪೋರ್ಟ್‌ನ ಟ್ರಾನ್ಸಿಟ್ ಪ್ರದೇಶದಲ್ಲೇ ಮಹಿಳೆ ಬಂಧಿ: ಎಂದಿನ ಸಾಮಾನ್ಯ ಸಾರಿಗೆಯಾಗಬೇಕಿದ್ದ ಪ್ರಯಾಣದ ವೇಳೆ ವಿಮಾನ ನಿಲ್ದಾಣದ ಟ್ರಾನ್ಸಿಟ್ ಪ್ರದೇಶದಲ್ಲೇ ನನ್ನನ್ನು ದೀರ್ಘಕಾಲದವರೆಗೆ ಬಂಧನಕ್ಕೆ ಒಳಪಡಿಸಿದರು. ಅಲ್ಲಿ ನನಗೆ ಸ್ಪಷ್ಟ ಮಾಹಿತಿ, ಆಹಾರ ಮತ್ತು ಮೂಲಭೂತ ಸೌಲಭ್ಯಗಳನ್ನು ಪಡೆಯಲು ಕೂಡಾ ಅವಕಾಶ ನಿರಾಕರಿಸಿದರು ಎಂದು ತಾವು ಅನುಭವಿಸಿದ ಯಾತನೆಯನ್ನು ವಿವರಿಸಿದ್ದಾರೆ.
ಟಿಕೆಟ್ ಮರು ಬುಕ್ ಮಾಡಲು, ಊಟ ಖರೀದಿಸಲೂ ನಿರ್ಬಂಧ: ನನ್ನ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡರು. ಮಾನ್ಯವಾಗಿರುವ ವೀಸಾ ಹೊಂದಿದ್ದರೂ ಜಪಾನ್‌ಗೆ ಹೋಗುವ ನನ್ನ ಮುಂದಿನ ವಿಮಾನ ಹತ್ತದಂತೆ ನಿರ್ಬಂಧಿಸಿದರು. ನಾನು ಟಿಕೆಟ್ ಮರು ಬುಕ್ ಮಾಡಲು, ಊಟ ಖರೀದಿಸಲು ಅಥವಾ ಟರ್ಮಿನಲ್‌ಗಳ ನಡುವೆ ಚಲಿಸಲು ಕೂಡಾ ಸಾಧ್ಯವಿಲ್ಲ ಎಂದರು. ಇದಾದ ಬಳಿಕ ಚೀನಾ ಈಸ್ಟರ್ನ್‌ನಲ್ಲೇ ಹೊಸ ಟಿಕೆಟ್ ಖರೀದಿಸುವಂತೆ ಒತ್ತಡ ಹೇರಿದರು. ಇದರ ನಂತರವೇ ಪಾಸ್‌ಪೋರ್ಟ್ ಹಿಂತಿರುಗಿಸಲಾಗುವುದು ಎಂದರು. ಇದರಿಂದಾಗಿ ವಿಮಾನ ತಪ್ಪಿಹೋದ ಮತ್ತು ಹೊಟೇಲ್ ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ನನಗೆ ಸಾಕಷ್ಟು ನಷ್ಟವಾಯಿತು ಎಂದು ತಿಳಿಸಿದರು. ನೆರವಿಗೆ ಬಂದ ಭಾರತದ ದೂತವಾಸದ ಅಧಿಕಾರಿಗಳು: ಕೊನೆಗೆ ಯುಕೆಯಲ್ಲಿರುವ ಸ್ನೇಹಿತರ ಮೂಲಕ ಶಾಂಘೈನಲ್ಲಿರುವ ಭಾರತೀಯ ದೂತಾವಾಸವನ್ನು ಸಂಪರ್ಕಿಸುವಲ್ಲಿ ಪ್ರೇಮಾ ಯಶಸ್ವಿಯಾಗಿದ್ದಾರೆ. ಆ ನಂತರ ಭಾರತೀಯ ಅಧಿಕಾರಿಗಳು ಮಧ್ಯಪ್ರವೇಶಿಸಿ, ತಡರಾತ್ರಿ ಪ್ರಯಾಣ ಮುಂದುವರೆಸಲು ನೆರವಾದರು ಎಂದು ತಿಳಿಸಿದರು.
ಪ್ರಧಾನಿ ಮೋದಿಗೆ ಪತ್ರ: ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಅಧಿಕಾರಿಗಳಿಗೆ ಪ್ರೇಮಾ ಅವರು ಪತ್ರ ಬರೆದಿದ್ದು, ಈ ಘಟನೆಯನ್ನು ಭಾರತದ ಸಾರ್ವಭೌಮತ್ವ ಮತ್ತು ಅರುಣಾಚಲ ಪ್ರದೇಶದ ನಾಗರಿಕರಿಗೆ ಮಾಡಿದ ನೇರ ಅವಮಾನ ಎಂದು ತಿಳಿಸಿದ್ದಾರೆ. ಈ ವಿಷಯವನ್ನು ಬೀಜಿಂಗ್ ಜೊತೆ ಚರ್ಚಿಸಿ, ಸಂಬಂಧಪಟ್ಟ ವಲಸೆ ಮತ್ತು ವಿಮಾನಯಾನ ಸಿಬ್ಬಂದಿಯ ವಿರುದ್ಧ ಹೊಣೆಗಾರಿಕೆ ಮತ್ತು ಶಿಸ್ತು ಕ್ರಮ ಕೈಗೊಳ್ಳುವಂತೆ ಮತ್ತು ಸೂಕ್ತ ಪರಿಹಾರವನ್ನು ಪಡೆಯುವಂತೆಯೂ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.
