ಉದಯವಾಹಿನಿ, ಮುಂದಿನ ವರ್ಷ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಶನಿವಾರ ಪ್ರಕಟಿಸಿದೆ. ಆದರೆ, ದಕ್ಷಿಣ ಆಫ್ರಿಕಾ ಟಿ20ಐ ಸರಣಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಉಪ ನಾಯಕ ಶುಭಮನ್ ಗಿಲ್ ಅವರನ್ನು ಆಯ್ಕೆದಾರರು ಕೈ ಬಿಟ್ಟದ್ದಾರೆ. ಆ ಮೂಲಕ ಸಂಜು ಸ್ಯಾಮ್ಸನ್ ಅವರನ್ನು ಓಪನಿಂಗ್ ಬ್ಯಾಟ್ಸ್‌ಮನ್ ಹಾಗೂ ಮೊದಲ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಅಂದ ಹಾಗೆ ಶುಭಮನ್ ಗಿಲ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈ ಬಿಡಲು ಕಾರಣವೇನೆಂದು ಚೀಪ್ ಸೆಲೆಕ್ಟರ್ ಅಜಿತ್ ಅಗರ್ಕರ್ ಬಹಿರಂಗಪಡಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದ ಬಳಿಕ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಸುದ್ದಿಗಾರರು ಶುಭಮನ್ ಗಿಲ್ ಅವರನ್ನು ಏಕೆ ಕೈ ಬಿಡಲಾಯಿತು ಎಂದು ಪ್ರಶ್ನೆಯನ್ನು ಕೇಳಿದರು. ಶುಭಮನ್ ಗಿಲ್ ಅವರ ಗುಣಮಟ್ಟದ ಬಗ್ಗೆ ಯಾವುದೇ ಅನುಮಾನವಿಲ್ಲ. ಅವರು ಇತ್ತೀಚೆಗೆ ಟಿ20ಐ ಕ್ರಿಕೆಟ್‌ನಲ್ಲಿ ಹೆಚ್ಚಿನ ರನ್‌ಗಳನ್ನು ಗಳಿಸಿಲ್ಲ. ಅವರನ್ನು ಗುರುತಿಸುವಾಗ, ಇದನ್ನು ನಾವು ಪರಿಗಣಿಸುವುದಿಲ್ಲ. ಕಳೆದ ಟಿ20 ವಿಶ್ವಕಪ್ ಟೂರ್ನಿಯನು ಕಳೆದುಕೊಂಡಿದ್ದ ಅವರಿಗೆ ನಿಜಕ್ಕೂ ಅದೃಷ್ಟ ಇಲ್ಲವೆಂದು ಹೇಳಬಹುದು. ಆದರೆ, ಈಗ ನಾವು ವಿಭಿನ್ನ ಸಂಯೋಜನೆಯನ್ನು ಪ್ರಯತ್ನಿಸುತ್ತಿದ್ದೇವೆ,” ಎಂದು ಅಜಿತ್ ಅಗರ್ಕರ್ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
“ಮತ್ತೊಮ್ಮೆ ಹೇಳಬೇಕೆಂದರೆ, ಇದು ವೈಯಕ್ತಿಕ ಸಾಮರ್ಥ್ಯಕ್ಕಿಂತ ತಂಡದ ಸಮತೋಲನದ ಕುರಿತಾಗಿದೆ. ನಿರ್ದಿಷ್ಟವಾಗಿ ಅಗ್ರ ಕ್ರಮಾಂಕದಲ್ಲಿ ಇಬ್ಬರು ವಿಕೆಟ್‌ಕೀಪರ್‌ಗಳನ್ನು ಹೊಂದುವ ಕಲ್ಪನೆಯ ಬಗ್ಗೆ,” ಎಂದು ಅಗರ್ಕರ್ ಹೇಳಿದರು.
