ಉದಯವಾಹಿನಿ, ಅಡಿಲೇಡ್: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 82 ರನ್‌ಗಳ ಗೆಲುವು ಸಾಧಿಸುವ ಮೂಲಕ, 5 ಪಂದ್ಯಗಳ ಆ್ಯಷಸ್ ಟೆಸ್ಟ್( ಸರಣಿಯನ್ನು ಇನ್ನೆರಡು ಪಂದ್ಯಗಳು ಬಾಕಿ ಇರುವಂತೆಯೇ 3-0 ಮುನ್ನಡೆಯೊಂದಿಗೆ ಕೈವಶ ಮಾಡಿಕೊಂಡಿದೆ.
435 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ನಾಲ್ಕನೇ ದಿನದಾಟದ ಮುಕ್ತಾಯಕ್ಕೆ 63 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 207 ರನ್ ಗಳಿಸಿತ್ತು. ಪಂದ್ಯದ ಕೊನೆಯ ದಿನವಾದ ಇಂದು(ಭಾನುವಾರ) 228 ರನ್‌ಗಳ ಅವಶ್ಯಕತೆಯೊಂದಿಗೆ ಆಡಲಿಳಿದ ಇಂಗ್ಲೆಂಡ್ 352 ರನ್‌ಗೆ ಆಲೌಟ್ ಆಯಿತು.
ಬ್ಯಾಟಿಂಗ್ ಕಾಯ್ದುಕೊಂಡಿದ್ದ ಜೆಮಿ ಸ್ಮಿತ್ ಮತ್ತು ವಿಲ್ ಜ್ಯಾಕ್ಸ್ ಅಂತಿಮ ದಿನದಾಟದಲ್ಲಿ ಕೆಲ ಕಾಲ ಬೇರೂರಿ ನಿಂತು ಆಸೀಸ್ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಕೊನೆಗೂ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಬೇರ್ಪಡಿಸಿದರು. ಜೆಮಿ ಸ್ಮಿತ್ 60 ರನ್ ಬಾರಿಸಿದರೆ, ವಿಲ್ ಜ್ಯಾಕ್ಸ್ 47 ರನ್ ಗಳಿಸಿದರು. ಬ್ರೈಡನ್ ಕಾರ್ಸೆ 39 ರನ್ ಬಾರಿಸಿ ಅಜೇಯರಾಗಿ ಉಳಿದರು. ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ನಾಯಕ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಸ್ಪಿನ್ನರ್ ನಥಾನ್ ಲಿಯೋನ್ ತಲಾ ಮೂರು ವಿಕೆಟ್ ಕಿತ್ತರು. ಸರಣಿ ಸೋಲಿನ ಬೆನ್ನಲ್ಲೇ ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕಲಮ್ ತಲೆದಂಡ ಸಾಧ್ಯತೆ ಇದೆ.
