ಉದಯವಾಹಿನಿ, ವಾಷಿಂಗ್ಟನ್: ನ್ಯೂಯಾರ್ಕ್ನ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಜೋಹ್ರಾನ್ ಮಮ್ದಾನಿ ಅವರು ಇತ್ತೀಚೆಗೆ ಶ್ರೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ, ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಟ್ರಂಪ್ವೋರ್ವ ಫ್ಯಾಸಿಸ್ಟ್, ನಿರಂಕುಶ ಅಧಿಕಾರಿ ಎಂದು ಹೇಳಿದ್ದಾರೆ.
ಮೇಯರ್ ಮಮ್ದಾನಿ ಮತ್ತು ಯುಎಸ್ ಅಧ್ಯಕ್ಷ ಟ್ರಂಪ್ ಈ ಹಿಂದೆ ಹಲವು ಭಾರಿ ಪರಸ್ಪರ ತೀವ್ರ ಟಿಕಾಪ್ರಹಾರ ನಡೆಸಿದ್ದರು. ಚುನಾವಣಾ ಗೆಲುವಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಟ್ರಂಪ್, ಮಮ್ದಾನಿಯು ಶೇ.100ರಷ್ಟು ಕಮ್ಯುನಿಸ್ಟ್ ಹುಚ್ಚ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಮಮ್ದಾನಿ, ಟ್ರಂಪ್ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಜರಿದಿದ್ದರು. ಈ ನಡುವೆ ಕಳೆದ ಶುಕ್ರವಾರ ಭೇಟಿಯಾದ ಇಬ್ಬರೂ ನಾಯಕರು ನಗುಮೊಗದಲ್ಲೇ ಸಭೆ ನಡೆಸಿದ್ದರು. ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿ, ನ್ಯೂಯಾರ್ಕ್ ನಗರದ ಅಭಿವೃದ್ಧಿ ಕುರಿತು ಚರ್ಚಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಬಳಿಕ ಮೀಟ್ ದಿ ಪ್ರೆಸ್ ಸಂದರ್ಶನದಲ್ಲಿ ಮಾತನಾಡಿರುವ ಮಮ್ದಾನಿ, ತಮ್ಮ ಹಿಂದಿನ ಹೇಳಿಕೆ, ಅಭಿಪ್ರಾಯಗಳು ಬದಲಾಗಿಲ್ಲ. ನಮ್ಮ ರಾಜಕೀಯದಲ್ಲಿ ಮುಖ್ಯವಾಗಿ ನಾನು ಭಾವಿಸುವ ವಿಷಯವೆಂದರೆ, ನಮ್ಮಲ್ಲಿನ ಭಿನ್ನಾಭಿಪ್ರಾಯವು ದೂರ ಆಗುವುದಿಲ್ಲ. ನಾನು ಓವಲ್ ಕಚೇರಿಗೆ ಒಂದು ಅಂಶ ಅಥವಾ ನಿಲುವನ್ನು ತಿಳಿಸಲು ಹೋಗಿರಲಿಲ್ಲ. ನ್ಯೂಯಾರ್ಕ್ ನಿವಾಸಿಗಳ ಪರವಾಗಿ ನಾನು ತೆರಳಿದ್ದೆ ಎಂದು ಹೇಳಿದ್ದಾರೆ. ಈ ನಡುವೆ, ಮಮ್ದಾನಿ ಟೀಕೆಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಟ್ರಂಪ್, ಅವರ ಹೇಳಿಕೆಗೆ ನನ್ನ ಅಭ್ಯಂತರವಿಲ್ಲ ಎಂದಿದ್ದಾರೆ.
ಸಂದರ್ಶನದಲ್ಲಿ ಫ್ಯಾಸಿಸ್ಟ್ ಕುರಿತು ಪ್ರಶ್ನೆಗೆ ಉತ್ತರಿಸಿದ ಮಮ್ದಾನಿ, ನಾನು ಹಿಂದೆ ಹೇಳಿದ್ದನ್ನೇ ಈಗ ಹೇಳುತ್ತಿದ್ದೇನೆ. ನಾವು ಕೆಲವು ನೀತಿಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದೇವೆ. ಆದರೆ ಪ್ರತಿಯೊಬ್ಬರಿಗೂ ಜೀವನವನ್ನು ಉತ್ತಮಗೊಳಿಸುವ ಉದ್ದೇಶವು ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷದಲ್ಲಿ ಬಹಳಷ್ಟು ಜನರು ಹಂಚಿಕೊಳ್ಳುವ ವಿಷಯವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದರು. ರಾಜಕೀಯವಾಗಿ ಬಹಳ ದೂರದಲ್ಲಿದ್ದರೂ, ಶ್ವೇತಭವನದ ಸಭೆಯು ಇಬ್ಬರಿಗೂ ಸಂಭಾವ್ಯ ರಾಜಕೀಯ ಪ್ರಯೋಜನಗಳನ್ನು ನೀಡಿತು. ಮೇಯರ್ ಕೂಡ ಅಧ್ಯಕ್ಷರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಯಿತು. ಟ್ರಂಪ್ ಕೈಗೆ ಸಿಗುವ ಬಗ್ಗೆ ಮಾತನಾಡಬೇಕಾಯಿತು, ಇದು ಮತದಾರರಿಗೆ ಹೆಚ್ಚು ಮುಖ್ಯ ವಿಷಯವಾಗಿದೆ ಎಂದು ಮಮ್ದಾನಿ ಹೇಳಿದರು.
