ಉದಯವಾಹಿನಿ, ಲಖನೌ : ರೈಲು ಪ್ರಯಾಣವು ಬಜೆಟ್ ಫ್ರೆಂಡ್ಲಿ. ಅಲ್ಲದೆ ಪ್ರಯಾಣ ಕೂಡ ಆರಾಮವಾಗಿರುತ್ತದೆ ಎಂಬ ಕಾರಣಕ್ಕೆ ಬಹುತೇಕರು ರೈಲನ್ನು ಇಷ್ಟಪಡುತ್ತಾರೆ. ರೈಲಿನಲ್ಲಿ ಮಾರಾಟ ಮಾಡುವ ಬಹುತೇಕ ತಿಂಡಿಗಳನ್ನು ಶುಚಿ ಇಲ್ಲದ ಸ್ತಳಗಳಲ್ಲಿ ತಯಾರಿಸಲಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಇದೀಗ ವ್ಯಕ್ತಿಯೊಬ್ಬ ಮಿನರಲ್ ವಾಟರ್ ಬಾಟಲಿಗೆ ಟ್ಯಾಪಿನ ನೀರು ತುಂಬಿಸಿ ಮಾರಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದ್ದು, ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ನಲ್ಲಿ ನಡೆದಿದೆ. ಕೈ ತೊಳೆಯುವ ನೀರನ್ನು ಪ್ಲಾಸ್ಟಿಕ್ ಬಾಟಲಿಗೆ ಹಾಕಿ ಮಾರಾಟ ಮಾಡುತ್ತಿರುವ ವಿಡಿಯೊ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಆಘಾತಕಾರಿ ಘಟನೆಯು ರೈಲ್ವೆ ಪ್ರಯಾಣಿಕರ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಕಳವಳವನ್ನು ಹುಟ್ಟು ಹಾಕಿದೆ.
ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ರೈಲ್ವೇ ಪ್ಲಾಟ್ ಫಾರ್ಮ್‌ನಲ್ಲಿರುವ ಟ್ಯಾಪ್ ವಾಟರ್ ಸಮೀಪ ನಿಂತಿದ್ದಾನೆ. ಅಲ್ಲಿನ ಸ್ಥಳ ಬಹಳ ಕೊಳಕಾಗಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಟ್ಯಾಂಕ್ ಸುತ್ತಲೂ ಪಾಚಿ ಕಟ್ಟಿದೆ. ಆ ವ್ಯಕ್ತಿ ಅಲ್ಲಿಗೆ ಪ್ಲಾಸ್ಟಿಕ್ ಖಾಲಿ ಬಾಟಲಿ ತಂದು ನೇರವಾಗಿ ನೀರು ತುಂಬಿಸುತ್ತಿದ್ದನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ.
10-12 ಖಾಲಿ ಬಾಟಲಿಗೆ ನೀರನ್ನು ತುಂಬಿ ಬಳಿಕ ಆತ ಅದನ್ನು ಪ್ಲಾಸ್ಟಿಕ್ ಪ್ಯಾಕ್‌ನೊಳಗೆ ಇಡುತ್ತಾನೆ. ಆ ವ್ಯಕ್ತಿ ವಿಡಿಯೊ ಮಾಡುವುದು ತಿಳಿದಿದ್ದರೂ ತನ್ನ ಕಾರ್ಯವನ್ನು ಮುಂದುವರಿಸಿದ್ದಾನೆ. ಈ ರೀತಿ ನಕಲಿ ನೀರಿನ ಬಾಟಲ್ ಪತ್ತೆಯಾಗಿದ್ದು ಇದೆ ಮೊದಲೇನಲ್ಲ. ಆತ ಅದನ್ನೇ ಮಾಡಿಕೊಂಡು ಬಂದಿರಬಹುದು ಎಂಬ ಅನುಮಾನ ನೆಟ್ಟಿಗರಲ್ಲಿ ಮೂಡಿದೆ. ವಿಡಿಯೊ ರೆಕಾರ್ಡ್ ಮಾಡುವ ವ್ಯಕ್ತಿಯು ಮಾರಾಟಗಾರನ ಮುಖ ತೋರಿಸಲು ಮುಂದಾಗುತ್ತಿದ್ದಂತೆ ಆ ವ್ಯಕ್ತಿ ಆತುರದಿಂದ ಬಾಟಲಿಗಳ ಸಂಪೂರ್ಣ ಬಂಡಲ್ ಅನ್ನು ಎತ್ತಿಕೊಂಡು ಹತ್ತಿರದ ಪ್ಯಾಸೆಂಜರ್ ರೈಲಿನ ಕಡೆಗೆ ಓಡುತ್ತಿರುವ ದೃಶ್ಯ ಕಾಣಬಹುದು.
