ಉದಯವಾಹಿನಿ, ಮೀರತ್‌: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮೀರತ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಪ್ರಿಯಕರನ ಜೊತೆಗೂಡಿ ಕೈ ಹಿಡಿದ ಪತಿಯನ್ನು ಬರ್ಬರ ಕೊಲೆಗೈದು ನೀಲಿ ಡ್ರಮ್‌ನಲ್ಲಿ ಶವವನ್ನು ತುಂಬಿ ಗುಂಡಿ ತೋಡಿ ಮುಚ್ಚಿಟ್ಟಿದ್ದ ಹಂತಕಿ ಮುಸ್ಕಾನ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಪತಿ ಸೌರಭ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪದಲ್ಲಿ ಜೈಲು ಪಾಲಾಗಿದ್ದ ಮುಸ್ಕಾನ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಆಕೆಯನ್ನು ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು.
ಹಿರಿಯ ಜೈಲು ಅಧೀಕ್ಷಕ ಡಾ. ವಿರೇಶ್ ರಾಜ್ ಶರ್ಮಾ ಅವರು ಭಾನುವಾರ ರಾತ್ರಿ 11.30ರ ಸುಮಾರಿಗೆ ಮುಸ್ಕಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆಗೆ ಹೆರಿಗೆಯಾಗಿದೆ. ನವಜಾತ ಶಿಶುವಿನ ತೂಕ 2.4 ಕೆಜಿ ಇದ್ದು, ವೈದ್ಯರು ಸಾಮಾನ್ಯ ಹೆರಿಗೆ ಮಾಡಲು ಸಾಧ್ಯವಾಯಿತು ಎಂದು ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ. ಶಕುನ್ ಸಿಂಗ್ ಹೇಳಿದ್ದಾರೆ. ಇನ್ನು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಯಾವುದೇ ಸಂಬಂಧಿಕರು ಭೇಟಿ ನೀಡದಿದ್ದರೂ, ಮುಸ್ಕಾನ್ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಮತ್ತು ವಾರ್ಡ್‌ಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಸ್ಕಾನ್‌ಳನ್ನು ದಿನವಿಡೀ ನಿರಂತರ ನಿಗಾದಲ್ಲಿಡಲಾಗಿದೆ.

ಏನಿದು ಪ್ರಕರಣ..?: ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಎಂದು ಹೇಳಲಾಗುವ ಸಾಹಿಲ್ ಶುಕ್ಲಾ ಕಳೆದ ವರ್ಷ ಮಾರ್ಚ್ 4 ರ ರಾತ್ರಿ ಮೀರತ್‌ನ ಇಂದಿರಾನಗರದಲ್ಲಿರುವ ತಮ್ಮ ಮನೆಯಲ್ಲಿ ಸೌರಭ್‌ಗೆ ಮಾದಕ ವಸ್ತು ನೀಡಿ ಪ್ರಜ್ಞೆ ತಪ್ಪಿಸಿದ್ದರು. ನಂತರ ಹಂತಕರಿಬ್ಬರು ಆತನನ್ನು ಇರಿದು ಬರ್ಬರವಾಗಿ ಕೊಲೆಗೈದಿದ್ದರು. ನಂತರ ಇಬ್ಬರೂ ಆತನ ತಲೆ ಮತ್ತು ಕೈಗಳನ್ನು ಕತ್ತರಿಸಿ, ಸಿಮೆಂಟ್ ತುಂಬಿದ ನೀಲಿ ಡ್ರಮ್‌ನಲ್ಲಿ ಅವಶೇಷಗಳನ್ನು ಬಚ್ಚಿಟ್ಟು ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದರು.
ಸೌರಭ್‌ನ ಕುಟುಂಬಸ್ಥರು ಆತ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿ ಮುಸ್ಕಾನ್‌ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಸೌರಭ್‌ನ ದೇಹದ ಉಳಿದ ಭಾಗಗಳನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆಯಲು ಹೋಗಿದ್ದ ಆರೋಪಿಗಳು ಕೈಗೆ ಸಿಕ್ಕಿದ್ದರು. ಪೊಲೀಸರ ಪ್ರಕಾರ, ಮುಸ್ಕಾನ್ ನವೆಂಬರ್ 2023 ರಿಂದಲೇ ಸೌರಭ್‌ ಕೊಲೆ ಸಂಚು ರೂಪಿಸಿದ್ದಳಂತೆ. ಅಚ್ಚರಿ ಎನ್ನುವಂತೆ ಮುಸ್ಕಾನ್‌ ಗರ್ಭಿಣಿಯಾಗಿರುವ ವಿಚಾರ ಆಕೆಯ ಬಂಧನ ನಂತರ ಸುದ್ದಿಯಾಗಿತ್ತು.

Leave a Reply

Your email address will not be published. Required fields are marked *

error: Content is protected !!