ಉದಯವಾಹಿನಿ, ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಮುನಾ ನದಿಯ ನೀರಿನ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಹನ್ನೆರಡು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು (ಎನ್‌ಡಿಆರ್‌ಎಫ್) ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಪೂರ್ವ ಮತ್ತು ಈಶಾನ್ಯ ದೆಹಲಿಯಲ್ಲಿ ತಲಾ ಮೂರು ತಂಡಗಳನ್ನು ನಿಯೋಜಿಸಲಾಗಿದ್ದು, ಎರಡು ತಂಡಗಳು ದೆಹಲಿಯ ಆಗ್ನೇಯ ಭಾಗದಲ್ಲಿ ಮತ್ತು ಒಂದು ತಂಡವು ಶಾಹದಾರ ಪ್ರದೇಶದಲ್ಲಿ ಬೀಡುಬಿಟ್ಟಿವೆ ಎಂದು ಪಡೆಯ ವಕ್ತಾರರು ತಿಳಿಸಿದ್ದಾರೆ. ತಂಡಗಳು ಗಾಳಿ ತುಂಬಬಹುದಾದ ದೋಣಿಗಳು, ಹಗ್ಗಗಳು ಮತ್ತು ಇತರ ರಕ್ಷಣಾ ಸಾಧನಗಳೊಂದಿಗೆ ಸಜ್ಜುಗೊಂಡಿವೆ. ಪ್ರವಾಹ ಪೀಡಿತ ಪ್ರದೇಶಗಳ ನಿವಾಸಿಗಳು ಮತ್ತು ಮುಳುಗುವಂತಹ ಅಪಾಯದ ಪರಿಸ್ಥಿತಿಯನ್ನು ಎದುರಿಸುತ್ತಿರುವವರನ್ನು ರಕ್ಷಿಸಲು ತಂಡಗಳು ಆಡಳಿತಕ್ಕೆ ಸಹಾಯ ಮಾಡುತ್ತಿವೆ ಎಂದು ಅವರು ಹೇಳಿದರು. ಬೆಳಿಗ್ಗೆ 10 ಗಂಟೆಗೆ ಯಮುನಾ ನದಿ ನೀರಿನ ಮಟ್ಟವು 208.53 ಮೀಟರ್ ತಲುಪಿದ್ದು, 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
