ಉದಯವಾಹಿನಿ, ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳ ಕಳಪೆ ಬ್ಯಾಟಿಂಗ್ ಪ್ರದರ್ಶನದ ಪರಿಣಾಮವಾಗಿ ಆತಿಥೇಯ ತಂಡ ಸೋಲಿನ ಸುಳಿಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐನ ಮಾಜಿ ಸೆಲೆಕ್ಟರ್ ಕ್ರಿಸ್ ಶ್ರೀಕಾಂತ್ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ತಂಡದ ವೈಫಲ್ಯದ ಕುರಿತು ಆಡಳಿತ ಮತ್ತು ಆಯ್ಕೆ ಮಂಡಳಿಯ ನೆಪಗಳನ್ನು ಕೇಳಲು ನಾವು ಸಿದ್ದರಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದ 0-3 ಅಂತರದಲ್ಲಿ ಸೋಲು ಕಂಡ ಬಳಿಕ ಪುನಃ ಇದೀಗ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಭಾರತ ವೈಟ್‌ವಾಷ್ ಮುಜುಗರ ಎದುರಿಸುವ ಸಾಧ್ಯತೆಯಿದೆ. ಕೊಲ್ಕತ್ತಾದ ಪಿಚ್‌ನಲ್ಲಿ ಸರಣಿಯ ಮೊದಲ ಪಂದ್ಯ ಸೋತ ನಂತರ ಗುವಾಹಟಿಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಆದರೆ ಟೀಮ್ ಇಂಡಿಯಾ ಬ್ಯಾಟಿಂಗ್ ಸ್ನೇಹಿಯಾಗಿರುವ ಇಲ್ಲಿಯೂ ಹಿನ್ನಡೆ ಅನುಭವಿಸಿರುವುದು ಆತಿಥೇಯರಿಗೆ ಸಂಕಷ್ಟ ತಂದಿದೆ.
ಈ ಕುರಿತು ಮಾತನಾಡಿರುವ ಟೀಮ್ ಇಂಡಿಯಾ ಮುಖ್ಯ ಆಯ್ಕೆದಾರ ಕ್ರಿಸ್ ಶ್ರೀಕಾಂತ್, ” ಪ್ರತಿ ಪಂದ್ಯದಲ್ಲೂ ಯಾರಾದರೂ ಪದಾರ್ಪಣೆ ಮಾಡುತ್ತಿದ್ದಾರೆ. ಅವರು ಟ್ರಯಲ್ ಅಂಡ್ ಎರರ್ ಎಂದು ಹೇಳಬಹುದು. ಗೌತಮ್ ಗಂಭೀರ್ ಏನು ಬೇಕಾದರೂ ಹೇಳಬಹುದು. ನನಗೆ ಚಿಂತೆ ಇಲ್ಲ. ನಾನು ಮಾಜಿ ನಾಯಕ ಮತ್ತು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ. ನಾನು ಏನು ಮಾತನಾಡುತ್ತಿದ್ದೇನೆಂದು ನನಗೆ ತಿಳಿದಿದೆ. ನಿಮಗೆ ಸ್ಥಿರತೆ ಬೇಕು,” ಎಂದು ಕಿಡಿಕಾರಿದ್ದಾರೆ.
