ಉದಯವಾಹಿನಿ, ಗುವಾಹಟಿ : ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 548ರನ್‌ಗಳ ಬೃಹತ್‌ ಮುನ್ನಡೆ ಸಾಧಿಸಿ ಡಿಕ್ಲೇರ್‌ ಘೋಷಿಸಿದೆ. ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತ ದಿನದಾಟದ ಅಂತ್ಯಕ್ಕೆ 27ರನ್‌ಗೆ 2 ವಿಕೆಟ್‌ ಕಳೆದುಕೊಂಡು ಇನ್ನೂ 522 ರನ್‌ ಹಿನ್ನಡೆಯಲ್ಲಿದೆ. ಬುಧವಾರ ಅಂತಿಮ ದಿನವಾಗಿದ್ದು ಸದ್ಯ ಭಾರತದ ಮುಂದೆ ಡ್ರಾ ಮಾಡಿಕೊಳ್ಳುವ ಯೋಜನೆಯೊಂದೆ ಬಾಕಿ ಉಳಿದಿದೆ. ಪವಾಡವೊಂದು ಸಂಭವಿಸಿದರಷ್ಟೇ ಗೆಲುವು ಸಾಧ್ಯ.
ದ್ವಿತೀಯ ಇನಿಂಗ್ಸ್‌ನಲ್ಲಿ 3ನೇ ದಿನಕ್ಕೆ ವಿಕೆಟ್‌ ನಷ್ಟವಿಲ್ಲದೆ 26 ರನ್‌ ಗಳಿಸಿದ್ದ ದಕ್ಷಿಣ ಆಫ್ರಿಕಾ, 4ನೇ ದಿನ ಉತ್ತಮ ಬ್ಯಾಟಿಂಗ್‌ ನಡೆಸಿತು. 5 ವಿಕೆಟ್‌ಗೆ 260 ರನ್‌ ಬಾರಿಸಿ ಡಿಕ್ಲೇರ್‌ ಘೋಷಿಸಿತು. ಆರಂಭಿಕರಾದ ರಿಕಲ್ಟನ್(35) ಮತ್ತು ಮಾರ್ಕ್ರಮ್‌(29) ರನ್‌ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮೊದಲ ವಿಕೆಟ್‌ಗೆ 59 ರನ್‌ಗಳ ಜತೆಯಾಟ ನಡೆಸಿತು. ಆ ಬಳಿಕ ಬಂದ ಸ್ಟಬ್ಸ್ ಆಕರ್ಷಕ ಅರ್ಧಶತಕ ಬಾರಿಸಿದರು.
180 ಎಸೆತ ಎದುರಿಸಿದ ಸ್ಟಬ್ಸ್‌ 9 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 90 ರನ್‌ ಬಾರಿಸಿದರು. ಶತಕದತ್ತ ದಾಪುಗಾಲಿಡುತ್ತಿದ್ದ ಅವರನ್ನು ಆಲ್‌ರೌಂಡರ್‌ ರವೀಂದ್ರ ಜಡೇಜಾ ಕ್ಲೀನ್‌ ಬೌಲ್ಡ್‌ ಮಾಡಿ ಶತಕಕ್ಕೆ ಅಡ್ಡಿಪಡಿಸಿದರು. ನಾಯಕ ಟೆಂಬ ಬವುಮಾ ಅವರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಕೇವಲ 3ರನ್‌ಗೆ ವಿಕೆಟ್‌ ಕಳೆದುಕೊಂಡು ನಿರಾಸೆ ಮೂಡಿಸಿದರು. ಟೋನಿ ಡಿ ಜೋರ್ಜಿ 49 ರನ್‌ಗೆ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ದಕ್ಷಿಣ ಆಫ್ರಿಕಾ ಇನಿಂಗ್ಸ್‌ ಡಿಕ್ಲೇರ್‌ ಘೋಷಿಸಿತು. ಮಲ್ಡರ್ ಅಜೇಯ 35ರನ್‌ ಗಳಿಸಿದರು.
ಭಾರತ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಹೊರತುಪಡಿಸಿ ಉಳಿದ ಬೌಲರ್‌ಗಳು ಯಶಸ್ಸು ಕಾಣಲಿಲ್ಲ. ಜಡೇಜಾ 62 ರನ್‌ಗೆ 4 ವಿಕೆಟ್‌ ಕಿತ್ತರು. ಇದೇ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ 50 ಪ್ಲಸ್‌ ವಿಕೆಟ್‌ ಕಲೆಹಾಕಿದ 5ನೇ ಭಾರತೀಯ ಬೌಲರ್‌ ಎನಿಸಿಕೊಂಡರು. ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಕುಂಬ್ಳೆ ಹೆಸರಿನಲ್ಲಿದೆ. 21 ಟೆಸ್ಟ್ ಪಂದ್ಯಗಳನ್ನು ಆಡಿ 84 ವಿಕೆಟ್‌ಗಳನ್ನು ಕೆಡವಿದ್ದಾರೆ. 64 ವಿಕೆಟ್‌ ಪಡೆದಿರುವ ಜಾವಗಲ್ ಶ್ರೀನಾಥ್ ಎರಡನೇ, ಹರ್ಭಜನ್‌ ಸಿಂಗ್‌(60) ಮೂರನೇ ಸ್ಥಾನದಲ್ಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!