ಉದಯವಾಹಿನಿ, ಬೆಂಗಳೂರು: ದೇಶದಲ್ಲಿರುವ ಸಂವಿಧಾನ ವಿರೋಧಿ ಮನುವಾದಿಗಳನ್ನು ಗುರುತಿಸಿ. ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮೃತಿ ಜಾರಿಯಲ್ಲಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ “ಸಂವಿಧಾನ ದಿನಾಚರಣೆ – 2025” ಅನ್ನು ಉದ್ಘಾಟಿಸಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬರಿಗೆ ನಮಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮೃತಿ ಜಾರಿಯಲ್ಲಿತ್ತು. ಮನುಸ್ಮೃತಿಯಲ್ಲಿದ್ದ ಮನುಷ್ಯ ವಿರೋಧಿ, ಸಮಾನತೆ ವಿರೋಧಿ ನಿಯಮಗಳಿಗೆ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಅವಕಾಶ ಇಲ್ಲದಂತಾಯಿತು. ಅದಕ್ಕೇ ಮನುವಾದಿಗಳು ನಮ್ಮ ಸಂವಿಧಾನವನ್ನು ವಿರೋಧಿಸುತ್ತಾರೆ.
ಸಮ ಸಮಾಜ ನಿರ್ಮಾಣ, ಅಸಮಾನತೆ ನಿವಾರಣೆ ನಮ್ಮ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಆಶಯವಾಗಿತ್ತು. ಎನ್ನುವುದೇ ನಮ್ಮ ಸಂವಿಧಾನದ ಮೂಲ ಮಂತ್ರ. ಈ ದೇಶದ ಜನತೆಗೆ ಎಂಥ ಸಂವಿಧಾನ ಬೇಕು ಎನ್ನುವ ಬಗ್ಗೆ ಒಂದು ವರ್ಷ ಕಾಲ ಸಂವಿಧಾನ ಸಭೆಯಲ್ಲಿ ಸಮಗ್ರ ಚರ್ಚೆ ಬಳಿಕ ಅಂಗೀಕರಿಸಲಾಗಿದೆ. ಫೆಡರಲ್, ಯೂನಿಟರಿ, ರಿಟರ್ನ್, ಅನ್ ರಿಟರ್ನ್ ಸಂವಿಧಾನಗಳು ವಿಶ್ವದಲ್ಲಿವೆ. ನಮ್ಮದು ರಿಟರ್ನ್ (ಲಿಖಿತ) ಸಂವಿಧಾನ. ನಮ್ಮ ದೇಶದಲ್ಲಿರುವಷ್ಟು ಜಾತಿ, ಧರ್ಮಗಳು ಬೇರೆ ಯಾವ ದೇಶದಲ್ಲೂ ಇಲ್ಲ. ಹೀಗಾಗಿ ಈ ನೆಲಕ್ಕೆ ಒಪ್ಪಿಗೆಯಾಗುವ ಸಂವಿಧಾನವನ್ನು ಅಂಬೇಡ್ಕರ್ ಕೊಟ್ಟರು.
ಮನುವಾದಿಗಳು ಸಂವಿಧಾನ ಅಂಬೇಡ್ಕರ್ ಅವರಿಂದ ಆಗಿಲ್ಲ ಎಂದು ವಾದಿಸುತ್ತಾರೆ. ಆದರೆ ಅಂಬೇಡ್ಕರ್ ಅವರೇ ಸಂವಿಧಾನ ಶಿಲ್ಪಿ ಎನ್ನುವುದನ್ನು ಮರೆಯಬಾರದು. ಅಂಬೇಡ್ಕರ್ ಅವರಿಗೆ ಈ ದೇಶದ ಜಾತಿ ವ್ಯವಸ್ಥೆ ಮತ್ತು ಅಪಾಯಗಳು ಅರ್ಥ ಆಗಿತ್ತು. ಅದಕ್ಕೇ ನಮ್ಮ ಸಂವಿಧಾನದಲ್ಲಿ ಮೀಸಲಾತಿಯನ್ನು ಸೇರಿಸಿದರು.
