ಉದಯವಾಹಿನಿ, ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವು ಮಾಜಿ ಪ್ರಧಾನಿಗೆ ಅಲ್ಲಿನ ನ್ಯಾಯಮಂಡಳಿಯು ನೀಡಿದ ಮರಣದಂಡನೆ ವಿರೋಧಿಸಿ ನವೆಂಬರ್ 30 ರವರೆಗೆ ದೇಶಾದ್ಯಂತ ಆಂದೋಲನಗಳು ಮತ್ತು ಪ್ರತಿರೋಧ ಮೆರವಣಿಗೆಗಳನ್ನು ಮಾಡುವುದಾಗಿ ಮಂಗಳವಾರ ಘೋಷಿಸಿದೆ.ನವೆಂಬರ್ 17 ರಂದು ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ , ಶೇಖ್​ ಹಸೀನಾ ಗೈರುಹಾಜರಿಯಲ್ಲಿ ನಡೆದ ವಿಚಾರಣೆಯ ನಂತರ ಮಾನವೀಯತೆಯ ವಿರುದ್ಧ ಅಪರಾಧಗಳನ್ನು ಎಸಗಿದ ಆರೋಪದ ಮೇಲೆ 78 ವರ್ಷದ ಮಾಜಿ ಪ್ರಧಾನಿ ಮತ್ತು ಅಂದಿನ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಲ್ ಅವರಿಗೆ ಮರಣದಂಡನೆ ವಿಧಿಸಿತ್ತು. ಹಸೀನಾ ಪ್ರಸ್ತುತ ಭಾರತದಲ್ಲಿದ್ದಾರೆ.ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವಾಮಿ ಲೀಗ್, ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಯಿಂದ ಹಸೀನಾ ಮತ್ತು ಅವರನ್ನು ಹೊರಗಿಡಲು ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ನಡೆಸಿದ ರಾಜಕೀಯ ಪಿತೂರಿಯ ಭಾಗವಾಗಿದೆ ಎಂದು ಆರೋಪಿಸಿದೆ.
ಐಸಿಟಿ ನ್ಯಾಯಮಂಡಳಿಯ ಕಾನೂನುಬಾಹಿರ ತೀರ್ಪನ್ನು ತಿರಸ್ಕರಿಸಿ ಮತ್ತು ಯೂನಸ್ ಅವರ ರಾಜೀನಾಮೆಗೆ ಒತ್ತಾಯಿಸಿ ಪಕ್ಷವು ನವೆಂಬರ್ 30 ರವರೆಗೆ ಎಲ್ಲ ಜಿಲ್ಲೆಗಳು ಮತ್ತು ಉಪ ಜಿಲ್ಲೆಗಳಲ್ಲಿ ಪ್ರತಿಭಟನೆಗಳು, ಪ್ರದರ್ಶನಗಳು ಮತ್ತು ಪ್ರತಿರೋಧ ಮೆರವಣಿಗೆಗಳನ್ನು ಮಾಡುವುದಾಗಿ ಘೋಷಿಸಿದೆ. ನ್ಯಾಯ ಮಂಡಳಿಯ ಈ ತೀರ್ಪನ್ನು ನಾಗರಿಕರು ತಿರಸ್ಕರಿಸಿದ್ದಾರೆ ಎಂದು ಪಕ್ಷವು ಹೇಳಿದೆ ಮತ್ತು ನ್ಯಾಯಮಂಡಳಿಯ ವಿಚಾರಣೆಯನ್ನು ಒಂದು ಅಪಹಾಸ್ಯ ಎಂದು ಬಣ್ಣಿಸಿದೆ.ರಾಜ್ಯ ವಿರೋಧಿ ಪಿತೂರಿಗಳು ಎಂದು ಕರೆಯುವುದನ್ನು ಎದುರಿಸಲು ತಳಮಟ್ಟದ ಕಾರ್ಯಕರ್ತರು, ರಾಜಕೀಯ ನಾಯಕರು ಮತ್ತು ಪಾಲುದಾರರೊಂದಿಗೆ ತೊಡಗಿಸಿಕೊಂಡಿರುವುದಾಗಿ ಅವಾಮಿ ಲೀಗ್ ಹೇಳಿದೆ. ಚುನಾವಣಾ ಪ್ರಕ್ರಿಯೆಯಿಂದ ವಿಮೋಚನಾ ಪರ ಶಕ್ತಿಗಳನ್ನು ಹೊರಗಿಡುವ ಯಾವುದೇ ಪ್ರಯತ್ನಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿರೋಧವನ್ನು ಮುನ್ನಡೆಸುವುದಾಗಿ ಪಕ್ಷವು ಪ್ರತಿಜ್ಞೆ ಮಾಡಿದೆ.ಬಾಂಗ್ಲಾದೇಶದಲ್ಲಿ ಹಂತ ಹಂತದ ಚುನಾವಣೆಯನ್ನು ಅನುಮತಿಸಲಾಗುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಅದನ್ನು ವಿರೋಧಿಸಲಾಗುವುದು ಎಂದು ಅವಾಮಿ ಲೀಗ್​ ಹೇಳಿದೆ. ಶೀಘ್ರದಲ್ಲೇ ಕಠಿಣ ರಾಷ್ಟ್ರವ್ಯಾಪಿ ಚಳವಳಿಯನ್ನು ಘೋಷಿಸಲಾಗುವುದು ಎಂದು ಅದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!