ಉದಯವಾಹಿನಿ, ಸ್ವಿಟ್ಜರ್ಲ್ಯಾಂಡ್: ಕಳೆದ ನಾಲ್ಕು ವರ್ಷಗಳಿಂದ ಮುಂದುವರೆದಿರುವ ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಉದ್ದೇಶಿತ ಒಪ್ಪಂದಕ್ಕೆ ಉಕ್ರೇನ್ ಒಪ್ಪಿಕೊಂಡಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೂ ಕೂಡ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಹಲವಾರು ಸಮಸ್ಯೆಗಳು ಬಗೆಹರಿಯದೇ ಉಳಿದಿವೆ ಎಂದು ಸಿಎನ್‌ಎನ್ ವರದಿ ಮಾಡಿದೆ.ಅಬುಧಾಬಿಯಲ್ಲಿ ರಷ್ಯಾದ ಪ್ರತಿನಿಧಿಗಳೊಂದಿಗೆ ಅಮೆರಿಕದ ಸೇನಾ ಕಾರ್ಯದರ್ಶಿ ಡಾನ್ ಡ್ರಿಸ್ಕಾಲ್ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಉಕ್ರೇನ್ ಶಾಂತಿ ಒಪ್ಪಂದಕ್ಕೆ ಒಪ್ಪಿಕೊಂಡಿದ್ದಾರೆ. ಕೆಲವು ಸಣ್ಣ ವಿಚಾರಗಳು ಇನ್ನೂ ಬಗೆಹರಿಯಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.ಉಕ್ರೇನ್‌ನ ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿ ರುಸ್ಟೆಮ್ ಉಮೆರೊವ್ ಕೂಡ ಎಕ್ಸ್ ಜಾಲತಾಣದಲ್ಲಿ ಈ ಕುರಿತು ತಿಳಿಸಿದ್ದು, ಜಿನೀವಾದಲ್ಲಿ ಚರ್ಚಿಸಲಾದ ಒಪ್ಪಂದದ ಪ್ರಮುಖ ನಿಯಮಗಳ ಕುರಿತು ಎರಡೂ ಕಡೆಯವರು ಸಾಮಾನ್ಯ ತಿಳಿವಳಿಕೆ ಹಂತಕ್ಕೆ ತಲುಪಿರುವುದಾಗಿ ಪೋಸ್ಟ್ ಮಾಡಿದ್ದಾರೆ.ಒಪ್ಪಂದದ ಮುಂದಿನ ಹಂತಗಳಲ್ಲಿ ಯುರೋಪಿಯನ್ ಪಾಲುದಾರರಿಂದ ಬೆಂಬಲವನ್ನು ಕೀವ್ ಈಗ ನಿರೀಕ್ಷಿಸುತ್ತಿದೆ. ಅಂತಿಮ ಹಂತಗಳನ್ನು ಪೂರ್ಣಗೊಳಿಸಲು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಮೆರಿಕಕ್ಕೆ ಭೇಟಿ ನೀಡಲು ಝೆಲೆನ್ಸ್ಕಿ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.ಯುದ್ದ ಅಂತ್ಯದ ಒಪ್ಪಂದಕ್ಕಾಗಿ ಜಿನೀವಾದಲ್ಲಿ ನಡೆದ ಮಾತುಕತೆ ಉತ್ತಮ ಫಲಿತಾಂಶ ವ್ಯಕ್ತವಾಗಿದೆ. ಆದರೂ ಇನ್ನೂ ಕೆಲವು ಕೆಲಸಗಳು ಬಾಕಿ ಇದೆ ಎನ್ನುವ ಮೂಲಕ ಉಕ್ರೇನ್ ಇನ್ನೂ ಮಾತುಕತೆಗಳನ್ನು ಅಂತಿಮ ಎಂದು ಘೋಷಿಸಲು ಸಿದ್ಧವಾಗಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಈ ಮೊದಲು ಅಮೆರಿಕದ 28 ಅಂಶಗಳ ಕರಡು ತಿರಸ್ಕರಿದ್ದ ಉಕ್ರೇನ್: ಶಾಂತಿ ಸಂಧಾನಕ್ಕೆ ಅಮೆರಿಕ ಪ್ರಸ್ತಾಪಿಸಿದ 28 ಅಂಶಗಳ ಯೋಜನೆಯನ್ನು ಈ ಹಿಂದಿನ ಸುತ್ತಿನ ಮಾತುಕತೆಯಲ್ಲಿ ಉಕ್ರೇನ್ ತಿರಸ್ಕರಿಸಿತ್ತು. ಉಕ್ರೇನ್ ತನ್ನ ಸಶಸ್ತ್ರ ಪಡೆಗಳ ಗಾತ್ರದ ಮೇಲಿನ ಮಿತಿಗಳನ್ನು ಒಪ್ಪಿಕೊಳ್ಳಲು, ನ್ಯಾಟೋಗೆ ಸೇರುವ ಪ್ರಯತ್ನವನ್ನು ಕೈಬಿಡುವ ಮತ್ತು ಕೆಲವು ಪ್ರದೇಶಗಳನ್ನು ರಷ್ಯಾಗೆ ಬಿಟ್ಟುಕೊಡುವ ಪ್ರಮುಖ ಅಂಶಗಳನ್ನು ಈ ಪ್ರಸ್ತಾವನೆಯಲ್ಲಿ ಸೇರಿಸಲಾಗಿತ್ತು. ಹಾಗೇ ರಷ್ಯಾದ ದೀರ್ಘಕಾಲದ ಬೇಡಿಕೆಗೆ ಅನುಗುಣವಾಗುವಂತೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗರಿಷ್ಠ ರಿಯಾಯಿತಿಗಳನ್ನು ಪಡೆಯಲು ಪ್ರಯತ್ನಿಸಿರುವುದಾಗಿ ಆರೋಪಿಸಿತ್ತು.
