ಉದಯವಾಹಿನಿ, ಗ್ಲಾಸ್ಗೋ: 2030ರ ಕಾಮನ್‌ವೆಲ್ತ್‌ ಗೇಮ್ಸ್‌ ಗುಜರಾತಿನ ಅಹಮದಾಬಾದ್‌ನಲ್ಲಿ ನಡೆಯಲಿದೆ. ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಇಂದು ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಾಸಭೆಯಲ್ಲಿ ಈ ನಿರ್ಧಾರ ಪ್ರಕಟವಾಗಿದೆ. 2030ರ ಶತಮಾನೋತ್ಸವದ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆ ಮಾಡಲು ಕಾಮನ್‌ವೆಲ್ತ್ ಗೇಮ್ಸ್‌ನ ಕಾರ್ಯನಿರ್ವಾಹಕ ಮಂಡಳಿ ಅಹಮದಾಬಾದ್‌ ನಗರವನ್ನು ಶಿಫಾರಸು ಮಾಡಿತ್ತು.
ಗೇಮ್ಸ್‌ ಆಯೋಜನೆಗೆ ನೈಜೀರಿಯಾ ತನ್ನ ರಾಜಧಾನಿ ಅಬುಜಾ ನಗರವನ್ನು ಬಿಡ್‌ಗೆ ಕಳುಹಿಸಿತ್ತು. ಆದರೆ ಇಂದು 74 ಸದಸ್ಯರ ಸಾಮಾನ್ಯ ಸಭೆಯು ಅಹಮದಾಬಾದ್‌ನಲ್ಲಿ ಕ್ರೀಡಾಕೂಟ ಆಯೋಜನೆಗೆ ಅನುಮೋದನೆ ನೀಡಿದೆ. ಅಬುಜಾದಲ್ಲಿ 2034ರ ಕ್ರೀಡಾಕೂಟ ಆಯೋಜನೆಯಾಗಲಿದೆ. ಈ ಹಿಂದೆ 2010 ರಲ್ಲಿ ಭಾರತ ದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜನೆ ಮಾಡಿತ್ತು. 2036ರ ಒಲಿಂಪಿಕ್ಸ್‌ ಆಯೋಜನೆಗೆ ಭಾರತ ಈಗಾಗಲೇ ಬಿಡ್‌ ಸಲ್ಲಿಸಿದೆ.
ಕಳೆದ ಕೆಲವು ತಿಂಗಳ ಹಿಂದೆ ಅಹಮದಾಬಾದ್‌ನಲ್ಲಿ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗಳು, ಏಷ್ಯನ್ ಅಕ್ವಾಟಿಕ್ಸ್ ಚಾಂಪಿಯನ್‌ಶಿಪ್‌ಗಳು ಮತ್ತು ಫುಟ್‌ಬಾಲ್‌ನ AFC ಅಂಡರ್-17 ಏಷ್ಯನ್ ಕಪ್ 2026 ಅರ್ಹತಾ ಪಂದ್ಯಗಳನ್ನು ಆಯೋಜಿಸಿತ್ತು.ಮುಂದಿನ ವರ್ಷ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಮತ್ತು ಏಷ್ಯಾ ಪ್ಯಾರಾ-ಆರ್ಚರಿ ಕಪ್ ಅನ್ನು ಆಯೋಜಿಸಲಿದೆ.

Leave a Reply

Your email address will not be published. Required fields are marked *

error: Content is protected !!